ಚೆನ್ನೈ(ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ ಅವರನ್ನು ಇಲ್ಲಿನ ಅಯನಂಬಾಕ್ಕಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಪ್ರಹ್ಲಾದ್ ಮೋದಿ ಅವರು ಆಧ್ಯಾತ್ಮಿಕ ಕ್ಷೇತ್ರಗಳ ಪ್ರವಾಸದಲ್ಲಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಕನ್ಯಾಕುಮಾರಿ, ಮಧುರೈ, ರಾಮೇಶ್ವರಂನಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಅನಿರೀಕ್ಷಿತವಾಗಿ, ಅವರು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದ್ದರಿಂದ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಹ್ಲಾದ್ ಮೋದಿ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕದ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರ ಸಹೋದರ ಮತ್ತು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಪ್ರಹ್ಲಾದ್ ಮೋದಿ ಅವರು ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಬಂಡೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು.
ಇದನ್ನೂ ಓದಿ: ವಿಶ್ವಪ್ರಸಿದ್ಧ ಮುರುಡೇಶ್ವರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಸಹೋದರ
ವಿಶೇಷ ವಿಮಾನದ ಮೂಲಕ ಅಹಮದಾಬಾದ್ಗೆ: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ ಹಾಗೂ ಕುಟುಂಬಸ್ಥರು ವಿಶೇಷ ವಿಮಾನದ ಮೂಲಕ ಅಹಮದಾಬಾದ್ಗೆ ಪ್ರಯಾಣ ಬೆಳೆಸಿದ್ದರು. ಕಡಕೊಳದ ಬಳಿ ಕಾರು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಪ್ರಹ್ಲಾದ್ ಮೋದಿ ಹಾಗೂ ಕುಟುಂಬದ ಮೂವರು ಗಾಯಗೊಂಡಿದ್ದು ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಪ್ರಹ್ಲಾದ್ ಮೋದಿಯವರೇ ಪತ್ರಿಕಾಗೋಷ್ಠಿ ನಡೆಸಿ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ್ದರು.
ಈ ಮಧ್ಯೆ ತಾಯಿ ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸುದ್ದಿ ಕೇಳುತ್ತಿದ್ದಂತೆ ಅವರ ಆರೋಗ್ಯ ವಿಚಾರಿಸಲು ಮೈಸೂರಿನ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಅಹಮದಾಬಾದ್ಗೆ ತೆರಳಿದ್ದರು. ಅಹಮದಾಬಾದ್ಗೆ ಹೊರಡುವ ಮುನ್ನ ಆಸ್ಪತ್ರೆ ಬಳಿ ಮಾಧ್ಯಮದವರ ಜೊತೆಗೆ ಮಾತನಾಡಿದ ಪ್ರಹ್ಲಾದ್ ಮೋದಿ, ನನ್ನ ತಾಯಿಯ ಆರೋಗ್ಯ ಸ್ಥಿರವಾಗಿದೆ. ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಈಗ ಅಹಮದಾಬಾದ್ನತ್ತ ಹೊರಟಿದ್ದೇವೆ. ಅಲ್ಲಿಗೆ ಹೋದ ತಕ್ಷಣ ತಾಯಿಯ ಬಳಿ ತೆರಳಿ ಆರೋಗ್ಯ ವಿಚಾರಿಸುತ್ತೇವೆ. ಪ್ರಧಾನ ಮಂತ್ರಿಗಳು ಈಗಾಗಲೇ ಅಹಮದಾಬಾದ್ಗೆ ಬಂದು ತಾಯಿಯ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಿದ್ದರು. ಕಾರು ಅಪಘಾತದಲ್ಲಿ ಗಾಯಗೊಂಡಿದ್ದೆ. ನಾವು ಇದೀಗ ಆರೋಗ್ಯವಾಗಿದ್ದೇವೆ. ವೈದ್ಯರ ಸಲಹೆ ಪಡೆದೇ ಅಹಮದಾಬಾದ್ಗೆ ತೆರಳುತ್ತಿದ್ದೇವೆ. ನಮ್ಮನ್ನು ಕುಟುಂಬದವರ ರೀತಿ ನೋಡಿಕೊಂಡ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು.
ಇದನ್ನೂ ಓದಿ: ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ಅಹಮದಾಬಾದ್ಗೆ ತೆರಳಿದ ಪ್ರಹ್ಲಾದ್ ಮೋದಿ ಕುಟುಂಬ