ನವದೆಹಲಿ: ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಅಭಿಯಾನದ ಆವೇಗವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ ಎಂದು ರಾಷ್ಟ್ರದ ಜನತೆಯನ್ನು ಕೋರಿದ್ದಾರೆ.
74ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನಾವು ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ, ಅಲ್ಲದೇ ಈ ಹೋರಾಟದಲ್ಲಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಜೂನ್ 21 ರಂದು ಭಾರತವು ಒಂದು ದಿನದಲ್ಲಿ 86 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದರು.
ಇದನ್ನೂ ಓದಿ: ದೇಶದಲ್ಲಿ 50,040 ಹೊಸ ಕೋವಿಡ್ ಕೇಸ್ ಪತ್ತೆ.. 1,258 ಸೋಂಕಿತರು ಸಾವು
ಲಸಿಕೆಗಳ ಬಗ್ಗೆ ವದಂತಿಗಳನ್ನು ಹರಡುವವರು ಹರಡುತ್ತಲೇ ಇರಲಿ. ಆದರೆ ದಯವಿಟ್ಟು ಅವರ ಮಾತಿಗೆ ನೀವು ಕಿವಿ ಕೊಡಬೇಡಿ. ನಾನು ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡಿದ್ದೇನೆ. ನನ್ನ ತಾಯಿಗೆ ಸುಮಾರು ನೂರು ವರ್ಷ, ಅವರೂ ಎರಡೂ ಡೋಸ್ ಪಡೆದಿದ್ದಾರೆ. ಭಾರತದಲ್ಲಿ ಅನೇಕ ಗ್ರಾಮಗಳ ಶೇ. 100 ರಷ್ಟು ಗ್ರಾಮಸ್ಥರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಲಸಿಕೆಗಳಿಗೆ ಸಂಬಂಧಿಸಿದ ಯಾವುದೇ ತಪ್ಪು ಮಾಹಿತಿಯನ್ನು ನಂಬಬೇಡಿ ಎಂದು ಮೋದಿ ಮನವಿ ಮಾಡಿದರು.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಇಬ್ಬರು ಗ್ರಾಮಸ್ಥರೊಂದಿಗೆ ಮಾತನಾಡಿದ ಪಿಎಂ ಮೋದಿ, ವ್ಯಾಕ್ಸಿನ್ ಕುರಿತ ಅವರ ಅನುಮಾನಗಳನ್ನು ಬಗೆಹರಿಸಿ ಲಸಿಕೆ ಪಡೆಯುಂತೆ ವಿನಂತಿಸಿದರು. ವಿಜ್ಞಾನ- ವಿಜ್ಞಾನಿಗಳನ್ನು ನಂಬುವಂತೆ ಹಾಗೂ ವ್ಯಾಕ್ಸಿನೇಷನ್ ಜೊತೆಗೆ ಕೋವಿಡ್ ಮಾನದಂಡಗಳನ್ನು ಪಾಲಿಸುವಂತೆ ದೇಶದ ಜನತೆಗೆ ಮೋದಿ ತಿಳಿಸಿದರು.