ಲಖನೌ(ಉತ್ತರ ಪ್ರದೇಶ): ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರಯಾಗರಾಜ್ಗೆ ಇಂದು ಭೇಟಿ ನೀಡಲಿದ್ದು, ಸುಮಾರು 1.6 ಸ್ವಸಹಾಯ ಗುಂಪುಗಳಿಗೆ ಸುಮಾರು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಹಣ ರವಾನೆ ಮಾಡಲಾಗುತ್ತದೆ. 80 ಸಾವಿರ ಸ್ವಸಹಾಯ ಗುಂಪುಗಳು ತಲಾ 1.10 ಲಕ್ಷ ರೂಪಾಯಿಯನ್ನು ಸಮುದಾಯ ಹೂಡಿಕೆ ನಿಧಿಯನ್ನಾಗಿ ಮತ್ತು 60 ಸಾವಿರ ಸ್ವಸಹಾಯ ಗುಂಪುಗಳು ಆವರ್ತ ನಿಧಿಯನ್ನಾಗಿ 15 ಸಾವಿರ ರೂಪಾಯಿಗಳನ್ನು ಪಡೆಯಲಿವೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ.
ಪ್ರಧಾನಿ ಮೋದಿ ಅವರು ಡಿಸೆಂಬರ್ 21ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ ಮತ್ತು ಮಧ್ಯಾಹ್ನ 1 ಗಂಟೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಧಾನಮಂತ್ರಿಯವರ ದೂರದೃಷ್ಟಿಯಂತೆ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿಶೇಷವಾಗಿ ತಳಮಟ್ಟದಲ್ಲಿ ಅವರಿಗೆ ಅಗತ್ಯ ಕೌಶಲ್ಯ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
20 ಸಾವಿರ ಬ್ಯುಸಿನೆಸ್ ಕರೆಸ್ಪಾಂಡೆಂಟ್ಗಳನ್ನು (BC- Sakhi) ಉತ್ತೇಜಿಸಲು ಅವರ ಖಾತೆಗಳಿಗೆ ಮೊದಲ ತಿಂಗಳ ಸ್ಟೈಫಂಡ್ ಆಗಿ 4 ಸಾವಿರ ರೂಪಾಯಿಗಳನ್ನು ಇದೇ ಕಾರ್ಯಕ್ರಮದಲ್ಲಿ ವರ್ಗಾಯಿಸಲಾಗುತ್ತದೆ.
ಈ ಕಾರ್ಯಕ್ರಮದ ನಂತರ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 202 ಪೌಷ್ಟಿಕಾಂಶ ತಯಾರಿಕಾ ಘಟಕಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಯುವಕರ ಕೈನಲ್ಲಿದೆ ಉತ್ತರಾಖಂಡದ ಅಧಿಕಾರ: ತೇಜಸ್ವಿ ಸೂರ್ಯ