ವಾರಣಾಸಿ, ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ತಮ್ಮ ಒಂದು ದಿನದ ಭೇಟಿಯಲ್ಲಿ ಸುಮಾರು 6 ಗಂಟೆಗಳ ಸ್ವಕ್ಷೇತ್ರದಲ್ಲಿ ಕಾಲ ಕಳೆಯಲಿದ್ದಾರೆ. ವಿಶೇಷವಾಗಿ ಪೂರ್ವಾಂಚಲ್‌ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ 1651 ಕೋಟಿ ರೂ ವೆಚ್ಚದ ಯೋಜನೆಗಳನ್ನು ಪೂರ್ವಾಂಚಲ್‌ಗೆ ಪ್ರಧಾನಿ ಇಂದು ಉಡುಗೊರೆಯಾಗಿ ನೀಡಲಿದ್ದಾರೆ.
ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್, ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಭಾಗವಹಿಸಲಿದ್ದಾರೆ.
ಇಂದು ತಮ್ಮ ಸಂಸದೀಯ ಕ್ಷೇತ್ರದ ಮೂರು ವಿಭಿನ್ನ ಸ್ಥಳಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 12 ಗಂಟೆಗೆ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಇಲ್ಲಿಂದ ಹೆಲಿಕಾಪ್ಟರ್ ಮೂಲಕ ರಾಜತಾಲಬ್ ಬಳಿಯ ಸೇವಾಪುರಿ ವಿಧಾನಸಭೆಯ ಗಂಜಾರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರು ಗಂಜಾರಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗಂಜಾರಿಯಲ್ಲಿ 451 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ಇಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಏಕೆಂದರೆ ಶಿವನಿಗೆ ಸಂಬಂಧಿಸಿದ ವಸ್ತುಗಳ ವಿಷಯದ ಮೇಲೆ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಹೊರಗೆ ಬೃಹತ್ ತ್ರಿಶೂಲಗಳನ್ನು ತಯಾರಿಸಲಾಗುತ್ತಿದ್ದು, ಅದರ ಮೇಲೆ ಫ್ಲಡ್ ಲೈಟ್ಗಳನ್ನು ಅಳವಡಿಸಲಾಗುವುದು. ಕ್ರೀಡಾಂಗಣದ ಮುಖ್ಯ ಕಟ್ಟಡವನ್ನು ಶಿವನ ಡಮರುಗದಂತೆ ನಿರ್ಮಿಸಲಾಗುತ್ತಿದೆ. ಇದೇ ವೇಳೆ ಕ್ರೀಡಾಂಗಣದ ಪ್ರವೇಶ ಬಿಲ್ವಪತ್ರದಂತೆ ವಿನ್ಯಾಸಗೊಳ್ಳಲಿದೆ.
ಗಂಜಾರಿ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ವಾರಣಾಸಿ ಪೊಲೀಸ್ ಲೈನ್ಸ್ ತಲುಪಲಿದ್ದಾರೆ. ಪೊಲೀಸ್ ಲೈನ್‌ನಿಂದ ರಸ್ತೆ ಮೂಲಕ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಆಟದ ಮೈದಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿದ್ದು, ಹೂವು, ಶಂಖ ನಾದದಿಂದ ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ.
ಇಲ್ಲಿಂದ ಪ್ರಧಾನಿಯವರು ರಸ್ತೆ ಮೂಲಕ 'ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್' ತಲುಪಲಿದ್ದಾರೆ. 16 ವಿಭಾಗಗಳಲ್ಲಿ 1200 ಕೋಟಿ ರೂಪಾಯಿ ವೆಚ್ಚದಲ್ಲಿ ಯುಪಿ ಸರ್ಕಾರ ನಿರ್ಮಿಸಿರುವ 16 ಅಟಲ್ ವಸತಿ ಶಾಲೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ ಅವರು ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ.
ಓದಿ: ಆಸ್ಟ್ರೇಲಿಯಾ ಮಣಿಸಿ ಅಗ್ರಸ್ಥಾನಕ್ಕೇರಿದ ಭಾರತ.. ಮೂರು ಮಾದರಿ ಕ್ರಿಕೆಟ್ನಲ್ಲೂ ಟೀಂ ಇಂಡಿಯಾ ನಂ.1