ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ಪ್ರವಾಸದ ವೇಳೆ ಉಜ್ವಲಾ ಯೋಜನೆಯ ಫಲಾನುಭವಿ ಮಹಿಳೆಯ ಮನೆಗೆ ಭೇಟಿ ನೀಡಿದ ಕೆಲವೇ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ಆ ಕುಟುಂಬಕ್ಕೆ ವೈಯಕ್ತಿಕವಾಗಿ ಪತ್ರ ಬರೆದು, ಉಡುಗೊರೆಗಳನ್ನು ಕಳುಹಿಸಿದ್ದಾರೆ.
ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿಯಾದ ಅಯೋಧ್ಯೆಯ ಮೀರಾ ಮಾಝಿ ಅವರ ಮನೆಗೆ ದಿಢೀರ್ ಭೇಟಿ ನೀಡಿದ್ದ ಪ್ರಧಾನಿ, ಅಲ್ಲಿ ಚಹಾ ಸೇವಿಸಿದ್ದರು. ಇದೀಗ ಆ ಕುಟುಂಬ ಸದಸ್ಯರಿಗೆ ಚಹಾ ಕುಡಿಯುವ ಕಪ್ಗಳ ಸೆಟ್, ಬಣ್ಣಗಳ ಡ್ರಾಯಿಂಗ್ ಪುಸ್ತಕ ಸೇರಿದಂತೆ ಹಲವು ಉಡುಗೊರೆಗಳನ್ನು ನೀಡಿದ್ದಾರೆ. ಜೊತೆಗೆ ಪತ್ರವನ್ನೂ ಬರೆದು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಂತಸ ತಂದ ಚಹಾ, ಭೇಟಿ: ಮೀರಾ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಪತ್ರ ಬರೆದಿರುವ ಪ್ರಧಾನಿ, 'ರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿ, ನೀವು ತಯಾರಿಸಿದ ಚಹಾವನ್ನು ಕುಡಿದಿದ್ದು ತುಂಬಾ ಸಂತಸ ತಂದಿದೆ. ಅಯೋಧ್ಯೆಯಿಂದ ಬಂದ ನಂತರ, ನಿಮ್ಮ ಮಾತುಗಳನ್ನು ಹಲವು ಟಿವಿ ಚಾನೆಲ್‌ಗಳಲ್ಲಿ ನೋಡಿದೆ. ಸರ್ಕಾರದ ಯೋಜನೆಯ ಕುರಿತು ನೀವು ಹಂಚಿಕೊಂಡ ವಿಷಯವನ್ನು ಕಂಡು ನನಗೆ ಖುಷಿಯಾಯಿತು" ಎಂದು ಉಲ್ಲೇಖಿಸಿದ್ದಾರೆ.
"ನಿಮ್ಮಂತಹ ಕೋಟ್ಯಂತರ ಕುಟುಂಬಗಳ ನಗುವೇ ನನ್ನ ಬಂಡವಾಳ. ಅದುವೇ ನನಗೆ ದೊಡ್ಡ ಸಂತೃಪ್ತಿ. ಇದು ದೇಶಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡು, ಇನ್ನಷ್ಟು ಉತ್ಸುಕನಾಗಿ ಕೆಲಸ ಮಾಡಲು ಹೊಸ ಶಕ್ತಿ ನೀಡುತ್ತದೆ" ಎಂದು ಅವರು ಹೇಳಿದ್ದಾರೆ.
"ನೀವು (ಮೀರಾ) ಉಜ್ವಲಾ ಯೋಜನೆಯ ಕೋಟ್ಯಂತರ ಫಲಾನುಭವಿಗಳ ಪೈಕಿ 10ನೇ ಕೋಟಿ ಫಲಾನುಭವಿ. ಇದು ಕೇವಲ ಸಂಖ್ಯೆಯಲ್ಲ, ಬದಲಿಗೆ ಇದು ದೇಶದ ಕೋಟ್ಯಂತರ ಜನರ ಕನಸುಗಳು ಮತ್ತು ಸಂಕಲ್ಪಗಳ ನೆರವೇರಿಕೆಯ ನಿದರ್ಶನ. ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿರುವ ನಮಗೆ, ನಿಮ್ಮಂತಹ ಆಕಾಂಕ್ಷಿಗಳಿಂದ ತುಂಬಿರುವ ದೇಶದ ಜನರ ಉತ್ಸಾಹ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಮೀರಾ ಮನೆಯಲ್ಲಿ ಚಹಾ ಸೇವನೆ: ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಮೀರಾ ಮಾಝಿ ಅವರ ಮನೆಗೆ ದಿಢೀರ್ ಭೇಟಿ ನೀಡಿದ್ದರು. ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿ, ಅವರು ತಯಾರಿಸಿದ ಚಹಾ ಕುಡಿದಿದ್ದರು. ಮೋದಿ ಮನೆಗೆ ಬಂದಿದ್ದು, ದೇವರೇ ಬಂದಂತಾಗಿದೆ ಎಂದು ಮೀರಾ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಶಾಸಕ ಸುನಿಲ್ ಕುಮಾರ್ ಏಕಾಂಗಿ ಪ್ರತಿಭಟನೆ; ಪೊಲೀಸ್ ವಶಕ್ಕೆ