ನವದೆಹಲಿ: ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಗ್ರಂಥಗಳ ಗ್ರಂಥಾಲಯವನ್ನು ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದರ ಆತಿಥ್ಯ ವಹಿಸಲು ಮತ್ತು ಸೂಕ್ತ ಸಂಪನ್ಮೂಲಗಳನ್ನು ಒದಗಿಸಲು ಭಾರತವು ಸಿದ್ಧವಿದೆ ಎಂದು ಹೇಳಿದರು.
'ಭಾರತ-ಜಪಾನ್ ಸಂವಾದ ಸಮ್ಮೇಳನ'ವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸಂವಾದ ಆಯೋಜನೆಗೆ ಸಹಕರಿಸಿದ ಜಪಾನ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಇದು 6ನೇ ಭಾರತ-ಜಪಾನ್ ಸಂವಾದ ಸಮ್ಮೇಳನವಾಗಿದ್ದು, ಮೊದಲ ಸಮ್ಮೇಳನ ಬಿಹಾರದ ಬೋಧ್ ಗಯಾದಲ್ಲಿ ನಡೆದಿತ್ತು.
"ಐತಿಹಾಸಿಕವಾಗಿ ಬುದ್ಧನ ಸಂದೇಶದ ಬೆಳಕು ಭಾರತದಿಂದ ವಿಶ್ವದ ಅನೇಕ ಭಾಗಗಳಿಗೆ ಹರಡಿತು. ಇಂದು, ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳ ಗ್ರಂಥಾಲಯವನ್ನು ನಿರ್ಮಿಸುವ ವಿಚಾರವನ್ನು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ಭಾರತದಲ್ಲಿ ಇದರ ಆತಿಥ್ಯ ವಹಿಸಲು ಹಾಗೂ ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಸಂತೋಷ ಪಡುತ್ತೇವೆ" ಎಂದರು.
ಇದನ್ನೂ ಓದಿ: ಭಾರತದಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪಿಸಲು ರಾಹುಲ್ ಗಾಂಧಿಯಿಂದ ಮಾತ್ರ ಸಾಧ್ಯ: ಟಿಪಿಸಿಸಿ
ಇದರ ಸಂಶೋಧನೆಯು ಬುದ್ಧನ ಸಂದೇಶವು ನಮ್ಮ ಆಧುನಿಕ ಜಗತ್ತನ್ನು ಸಮಕಾಲೀನ ಸವಾಲುಗಳ ವಿರುದ್ಧ ಹೇಗೆ ಮಾರ್ಗದರ್ಶನ ಮಾಡುತ್ತದೆ ಎಂಬುದನ್ನು ಪರಿಶೀಲಿಸುತ್ತದೆ. ಗ್ರಂಥಾಲಯಕ್ಕೆ ಬೇಕಾದ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ವಿವಿಧ ದೇಶಗಳಿಂದ ಸಂಗ್ರಹಿಸಲಾಗುತ್ತದೆ. ಇವುಗಳನ್ನು ಭಾಷಾಂತರಿಸಿ ಬೌದ್ಧ ಧರ್ಮದ ಎಲ್ಲಾ ಸನ್ಯಾಸಿಗಳು ಮತ್ತು ವಿದ್ವಾಂಸರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಪ್ರಧಾನಿ ತಿಳಿಸಿದರು.