ನವದೆಹಲಿ : 73ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಇಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (ಎನ್‌ಡಬ್ಲ್ಯುಎಂ) ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಸೇನೆಯ ಮೂರು ವಿಭಾಗಗಳಾದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದರು.
ಈ ಬಾರಿಯ ಗಣರಾಜ್ಯೋತ್ಸವ ರಾಜಪಥದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ರಾಜಪಥ್ಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು.
ಕೋವಿಂದ್ ಅವರ ಜೊತೆ ಪತ್ನಿ ಸವಿತಾ ಕೋವಿಂದ್ ಕೂಡ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಂಡಿದ್ದಾರೆ. ಭಾರತ ಇಂದು ರಾಜಪಥದಲ್ಲಿ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಭಾರತದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿದ್ಯತೆಗಳ ಪ್ರದರ್ಶನ ವಿಶ್ವದ ಗಮನ ಸೆಳೆಯುತ್ತಿದೆ.
ರಾಜಪಥಕ್ಕೆ ಆಗಮಿಸುವುದಕ್ಕೂ ಮೊದಲು ಪ್ರಧಾನಿ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ದೇಶಕ್ಕಾಗಿ ಹೋರಾಟ ಮಾಡಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಇದನ್ನೂ ಓದಿ: ಕೋವಿಡ್ ಸಂಕಷ್ಟದ ನಡುವೆ ಸಂಭ್ರಮದ ಗಣರಾಜ್ಯೋತ್ಸವ.. ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರು ಭಾಗಿ
ಪ್ರತಿ ಸೇವೆಯ 7 ಸೈನಿಕರಿಂದ ಇಂಟರ್ ಸರ್ವೀಸ್ ಗಾರ್ಡ್ ತಂಡ (Inter services Guards) ರಚಿಸಲಾಗಿದೆ. ಈ ವರ್ಷ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ಸಿಡಿಆರ್ ಅಮಿತ್ ಕುಮಾರ್ ರಾಠಿ ಅವರಿಂದ ಗಾರ್ಡ್ಗಳಿಗೆ ಸೂಚನೆ ಕೊಡಲಾಯಿತು.
ಪ್ರಧಾನ ಮಂತ್ರಿ ಪುಷ್ಪಾರ್ಚನೆ ಮಾಡಿದಾಗ ಇಂಟರ್ ಸರ್ವೀಸ್ ಗಾರ್ಡ್‌ಗಳು 'ಸಲಾಮಿ ಶಾಸ್ತ್ರ' ಮತ್ತು 'ಶೋಕ್ ಶಾಸ್ತ್ರ'ವನ್ನು ಪ್ರಸ್ತುತಪಡಿಸಿದರು. ನಂತರ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಪ್ರಧಾನಿ ಡಿಜಿಟಲ್ ವಿಸಿಟರ್ಸ್ ಬುಕ್ ಆಫ್ ನ್ಯಾಷನಲ್ ವಾರ್ ಮೆಮೋರಿಯಲ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದರು.
ಆಜಾದಿ ಕಾ ಅಮೃತಮಹೋತ್ಸವದ ಭಾಗವಾಗಿ ಈ ಬಾರಿ ಗಣರಾಜ್ಯೋತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ