ಅಹ್ಮದಾಬಾದ್: ಗುಜರಾತ್ನಲ್ಲಿ ಇಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಇತ್ತ ಎರಡು ದಿನಗಳ ಬಿಡುವಿನ ಬಳಿಕ ಮತ್ತೆ ಚುನಾವಣಾ ಪ್ರಚಾರಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಗರದಲ್ಲಿ ಬೃಹತ್ ರೋಡ್ ಶೋ ನಡೆಸುವರು. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 16 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಗಂಟೆಗಳ ಕಾಲ 50 ಕಿಮೀ ರೋಡ್ ಶೋ ನಡೆಯಲಿದೆ.
ನರೋದ ಗಾಮ್‌ನಿಂದ ಆರಂಭವಾಗುವ ಈ ಮೆಗಾ ರೋಡ್ ಶೋ ಗಾಂಧಿನಗರ ದಕ್ಷಿಣ ಕ್ಷೇತ್ರದಲ್ಲಿ ಕೊನೆಗೊಳ್ಳಲಿದೆ ಎಂದು ಬಿಜೆಪಿ ತಿಳಿಸಿದೆ. ಮಧ್ಯಾಹ್ನ 3.30ಗೆ ರೋಡ್ ಶೋ ಆರಂಭವಾಗುವ ಸಾಧ್ಯತೆ ಇದ್ದು, ಸಂಜೆ 6.30ರವರೆಗೆ ಸಾಗಲಿದೆ. ಮಾರ್ಗಮಧ್ಯೆಯಲ್ಲಿ 35 ಕಡೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಸರ್ದಾರ್ ವಲ್ಲಭಬಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ವಿವಿಧ ನಾಯಕರ ಸ್ಮಾರಕಕ್ಕೆ ಮೋದಿ ನಮನ ಸಲ್ಲಿಸವರು.
ಡಿಸೆಂಬರ್ 5ರಂದು ಎರಡನೇ ಹಂತದ ಚುನಾವಣೆ ಎದುರಿಸಲಿರುವ 16 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಯುತ್ತದೆ. ಥಕ್ಕರ್ಬಾಪನಗರ, ಬಾಪುನಗರ, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್ಪುರ್ ಖಾಡಿಯಾ, ಎಲಿಸ್ಬ್ರಿಡ್ಜ್, ವೆಜಲ್ಪುರ್, ಘಟ್ಲೋಡಿಯಾ, ನರನ್ಪುರ್, ಸಬರಮತಿ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಮತಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ: ಗುಜರಾತ್ ವಿಧಾನಸಭಾ ಚುನಾವಣೆ: 89 ಕ್ಷೇತ್ರಗಳಿಗೆ ಮತದಾನ ಆರಂಭ