ನವದೆಹಲಿ: ಆಟಿಕೆಗಳು ಮತ್ತು ಗೇಮಿಂಗ್ ಕ್ಷೇತ್ರವೂ ಕೂಡಾ ಟಾಯ್ಕೋನಮಿಯ ಭಾಗವಾಗಿದೆ. ಆಟಿಕೆಗಳ ಮಾರುಕಟ್ಟೆ ಜಾಗತಿಕವಾಗಿ ಸುಮಾರು ನೂರು ಬಿಲಿಯನ್ ಡಾಲರ್ನಷ್ಟು ವ್ಯವಹಾರ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಟಾಯ್ಕೋಥಾನ್-2021ರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಮಾರುಕಟ್ಟೆಯ ವ್ಯವಹಾರಕ್ಕೆ ಭಾರತವು 1.5 ಬಿಲಿಯನ್ ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದು ಪ್ರಪಂಚವು ಭಾರತದ ಪ್ರಸ್ತುತ ಸಾಮರ್ಥ್ಯವನ್ನು, ಕಲಾ-ಸಂಸ್ಕೃತಿಯನ್ನು, ಭಾರತದ ಸಮಾಜವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಬಯಸುತ್ತಿದೆ. ನಮ್ಮ ಆಟಿಕೆಗಳು ಮತ್ತು ಗೇಮಿಂಗ್ ಉದ್ಯಮವೂ ಇದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ದೇಶಕ್ಕೆ ಈಗ ಶೇಕಡಾ 80ರಷ್ಟು ಆಟಿಕೆಗಳನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ದೇಶದಿಂದ ಹೊರಹೋಗುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆ ಎಂದು ಮೋದಿ ಸಲಹೆ ನೀಡಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಆನ್‌ಲೈನ್ ಅಥವಾ ಡಿಜಿಟಲ್ ಗೇಮ್ಗಳು ಭಾರತಕ್ಕೆ ಸೇರಿದವಲ್ಲ. ಇವುಗಳಲ್ಲಿ ಅನೇಕ ಗೇಮ್ಗಳು ಹಿಂಸೆಯನ್ನು ಉತ್ತೇಜಿಸುತ್ತವೆ ಅಥವಾ ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಇವುಗಳಿಗೆ ವಿರುದ್ಧ ಭಾರತವೂ ಗೇಮಿಂಗ್ ಉದ್ಯಮದಲ್ಲಿ ಸೃಜನಶೀಲತೆಯನ್ನು ಹೊಂದಬೇಕೆಂದು ಪ್ರಧಾನಿ ಮೋದಿ ಟಾಯ್ಕೋಥಾನ್-2021ರಲ್ಲಿ ಕರೆ ನೀಡಿದ್ದಾರೆ.
ಏನಿದು ಟಾಯ್ಕೋನಮಿ, ಟಾಯ್ಕೋಥಾನ್?
ಆಟಿಕೆಗಳ ಉದ್ಯಮವನ್ನು ಆರ್ಥಿಕತೆಯಲ್ಲಿ ಒಳಗೊಳ್ಳುವ ಪ್ರಕ್ರಿಯೆಗೆ ಟಾಯ್ಕೋನಮಿ ಎನ್ನಲಾಗುತ್ತದೆ. ಈ ಮೂಲಕ ಆಟಿಕೆಗಳ ಉದ್ಯಮದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳಾ ಮಾಜಿ ಕಾರ್ಪೊರೇಟರ್ ಬರ್ಬರ ಹತ್ಯೆ.. ಅಂದು ಪತಿ, ಇಂದು ಪತ್ನಿಯ ಕೊಲೆ!
ಇನ್ನು ಟಾಯ್ಕೋಥಾನ್ ಕೇಂದ್ರದ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಾಯೋಜಕತ್ವ ಇಲಾಖೆ, ಮಾಹಿತಿ ಮತ್ತು ಪ್ರಸಾರ ಇಲಾಖೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಜಂಟಿಯಾಗಿ ಆಯೋಜಿಸಿವೆ.
ಈ ಟಾಯ್ಕೋಥಾನ್ನಲ್ಲಿ ಆಟಿಕೆಗಳು ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಪರಿಚಯಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ.