ನವದೆಹಲಿ: ನೂರು ವರ್ಷಗಳ ನಂತರ ಬಂದ ಕೋವಿಡ್ ಸಾಂಕ್ರಾಮಿಕ ವಿರುದ್ಧದ ಯುದ್ಧದಲ್ಲಿ ದೇಶವು ಈಗ 100 ಕೋಟಿ ವ್ಯಾಕ್ಸಿನೇಷನ್ ಮೂಲಕ ಕೋವಿಡ್‌ಗೆ ಬಲವಾದ ರಕ್ಷಣಾತ್ಮಕ ಗುರಾಣಿ ಹೊಂದಿದೆ. ಈ ಸಾಧನೆ ಭಾರತದ ಪ್ರತಿಯೊಬ್ಬ ಪ್ರಜೆಯದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರಿಯಾಣದ ಜಜ್ಜರ್‌ನ ಏಮ್ಸ್‌ನಲ್ಲಿ ಇನ್ಫೋಸಿಸ್ ಫೌಂಡೇಶನ್ ನಿರ್ಮಿಸಿರುವ ವಿಶ್ರಮ ಸದನ(ವಿಶ್ರಮ್ ಸದನ್) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುಯಲ್ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಚಿಕಿತ್ಸೆಗಾಗಿ ಜಜ್ಜರ್‌ನಲ್ಲಿರುವ ಏಮ್ಸ್‌ಗೆ ಬಂದ ಜನರು ಸಾಕಷ್ಟು ಅನುಕೂಲಗಳನ್ನು ಪಡೆದಿದ್ದಾರೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಸ್ಥಾಪಿಸಿರುವ ವಿಶ್ರಾಮ ಸದನವು ರೋಗಿಗಳು ಮತ್ತು ಅವರ ಸಂಬಂಧಿಕರ ಆತಂಕವನ್ನು ಕಡಿಮೆ ಮಾಡುತ್ತದೆ ಎಂದರು.
ಕ್ಯಾನ್ಸರ್ ನಂತಹ ರೋಗಗಳ ಚಿಕಿತ್ಸೆಗಾಗಿ ರೋಗಿಗಳು ಮತ್ತು ಅವರ ಸಂಬಂಧಿಕರು ಪದೇ ಪದೆ ಭೇಟಿ ನೀಡಬೇಕಾಗುತ್ತದೆ. ಇಂದು ನಾವು ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಲು ಒತ್ತು ನೀಡುತ್ತಿರುವಾಗ, ಇದರಲ್ಲಿ ಖಾಸಗಿ ವಲಯದ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗೆ ಉಚಿತ ಚಿಕಿತ್ಸೆ ಸಿಗುತ್ತದೆಯೋ ಆಗ ಆತ ಸೇವೆಯನ್ನು ಪಡೆಯುತ್ತಾನೆ. ಈ ಸೇವೆಯಿಂದಾಗಿಯೇ ನಮ್ಮ ಸರ್ಕಾರವು ಸುಮಾರು 400 ಕ್ಯಾನ್ಸರ್ ಔಷಧಗಳ ಬೆಲೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.
ಇನ್ಫೋಸಿಸ್ ಫೌಂಡೇಶನ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದ ಅಡಿ ಜಜ್ಜರ್‌ನ ಏಮ್ಸ್‌ನಲ್ಲಿ 806 ಹಾಸಿಗೆಗಳ ವಿಶ್ರಾಮ ಸದನ ನಿರ್ಮಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.