ಅಹಮದಾಬಾದ್, ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎಎಪಿ ಮುಖಂಡರಾದ ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ನೀಡಿದ್ದ ಸಮನ್ಸ್ ರದ್ದುಪಡಿಸುವಂತೆ ಕೋರಿ ಅವರ ಸಾಮಾನ್ಯ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಜೆಸಿ ದೋಶಿ ಗುರುವಾರ ಗುಜರಾತ್ ವಿಶ್ವವಿದ್ಯಾಲಯ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಮುಂದಿನ ವಿಚಾರಣೆ ನವೆಂಬರ್ 3 ರಂದು ನಡೆಯಲಿದೆ.
ತಡೆ ನೀಡಲು ನಿರಾಕರಣೆ: ಗುಜರಾತ್ ವಿವಿ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋ ಕೋರ್ಟ್ ಸಮನ್ಸ್ ವಿಚಾರವಾಗಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಅಹಮದಾಬಾದ್ ಸಿಟಿ ಸಿವಿಲ್ ಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ತೀರ್ಪನ್ನು ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವಿಷಯದ ಕುರಿತು ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಜೆ.ಸಿ.ದೋಶಿ ಅವರ ನ್ಯಾಯಾಲಯದ ಮುಂದೆ ಈ ವಿಚಾರಣೆ ನಡೆಸಲಾಯಿತು. ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ವಿರುದ್ಧ ದೆಹಲಿಯ ಅಡ್ವೊಕೇಟ್ ರೆಬೆಕಾ ಜಾನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿದರು.
ಗುಜರಾತ್ ವಿಶ್ವವಿದ್ಯಾನಿಲಯಕ್ಕೆ ನೋಟಿಸ್: ಗುಜರಾತ್ ವಿವಿ ಸಂವಿಧಾನದ 12ನೇ ಪರಿಚ್ಛೇದದ ಅಡಿ ರಾಜ್ಯದ ವ್ಯಾಖ್ಯಾನಕ್ಕೆ ಒಳಪಡುತ್ತದೆ ಎಂದು ಎಎಪಿ ಮುಖಂಡರು ಹೈಕೋರ್ಟ್ ಗಮನಕ್ಕೆ ತಂದರು. ಅರ್ಜಿದಾರರ ಪ್ರಕರಣ ಅಂಗೀಕರಿಸಿ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ಜೆ.ಸಿ.ದೋಶಿ ಹೇಳಿದರು. ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅವರ ಅರ್ಜಿಯ ಅಂತಿಮ ನಿರ್ಧಾರದವರೆಗೆ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡುವಂತೆ ಅದು ಕೋರಲಾಗಿತ್ತು. ಆದರೆ, ನ್ಯಾಯಾಲಯ ಅವರ ಮನವಿಯನ್ನು ಸ್ವೀಕರಿಸಲಿಲ್ಲ.
ಏನಿದು ಪ್ರಕರಣ: ಪ್ರಧಾನಿ ಪದವಿಗೆ ಸಂಬಂಧಿಸಿದಂತೆ ವ್ಯಂಗ್ಯ ಮತ್ತು ಅವಹೇಳನಕಾರಿ ಹೇಳಿಕೆಗಳಿಗಾಗಿ ವಿಶ್ವವಿದ್ಯಾನಿಲಯ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್ ಮತ್ತು ಸಿಂಗ್ ಅವರಿಗೆ ಅಹಮದಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ಏಪ್ರಿಲ್ 15ರಂದು ಸಮನ್ಸ್ ಜಾರಿ ಮಾಡಿತ್ತು. ಮೋದಿ ಪದವಿ ಕುರಿತ ಮುಖ್ಯ ಮಾಹಿತಿ ಆಯುಕ್ತರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ ಗುಜರಾತ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಇಬ್ಬರು ಎಎಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಮೆಟ್ರೊಪಾಲಿಟನ್ ಕೋರ್ಟ್ ನೀಡಿರುವ ಸಮನ್ಸ್ ಪ್ರಶ್ನಿಸಿ ಇಬ್ಬರೂ ನಾಯಕರು ಸೆಷನ್ಸ್ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯವು ಆಗಸ್ಟ್ 7 ರಂದು ವಿಚಾರಣೆಗೆ ಮಧ್ಯಂತರ ತಡೆ ಕೋರಿ ಅವರ ಮನವಿಯನ್ನು ತಿರಸ್ಕರಿಸಿತು, ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.