ನವದೆಹಲಿ: ದೇಶದ ಕೋವಿಡ್-19 ಪರಿಸ್ಥಿತಿ ಮತ್ತು ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತಮಟ್ಟದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಿಎಂರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಪ್ರಸ್ತುತ ಭಾರತದ ಕೊರೊನಾ ಪರಿಸ್ಥಿತಿಯ ನಿಯಂತ್ರಣ, ಲಸಿಕಾಭಿಯಾನದ ಬಗ್ಗೆ ಚರ್ಚಿಸಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,26,098 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 3,890 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದ ಸೋಂಕಿತರ ಸಂಖ್ಯೆ 2,43,72,907 ಹಾಗೂ ಸಾವಿನ ಸಂಖ್ಯೆ 2,66,207ಕ್ಕೆ ಏರಿಯಾಗಿದೆ. ಇನ್ನು ಮೂರನೇ ಹಂತದ ವ್ಯಾಕ್ಸಿನೇಷನ್ ಡ್ರೈವ್ ನಡೆಯುತ್ತಿದೆ. ಆದರೆ ಲಸಿಕೆ ಅಭಾವದಿಂದಾಗಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುತ್ತಿಲ್ಲ. ಜನವರಿ 16ರಿಂದ ಈವರೆಗೆ ಒಟ್ಟು 18,04,57,579 ಮಂದಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ನಿನ್ನೆ 3.26 ಲಕ್ಷ ಹೊಸ ಕೋವಿಡ್ ಕೇಸ್: 3,890 ಮಂದಿ ಸಾವು
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರಷ್ಟೇ ಪಿಎಂ ಮೋದಿ, ಆಮ್ಲಜನಕ ಮತ್ತು ಔಷಧಿಗಳ ಲಭ್ಯತೆ ಮತ್ತು ಪೂರೈಕೆ ಕುರಿತು ಪರಿಶೀಲನಾ ಸಭೆ ನಡೆಸಿದ್ದರು.
ಕೋವಿಡ್-19 ಪರಿಸ್ಥಿತಿ ಮತ್ತು ಲಸಿಕಾಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಇಂದು ಮಧ್ಯಾಹ್ನ 3 ಗಂಟೆಗೆ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ಆರೋಗ್ಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.