ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸವನ್ನು ಶುಕ್ರವಾರ ಆರಂಭಿಸಿದ್ದಾರೆ. ಬಾಂಗ್ಲಾದೇಶದ ಸುವರ್ಣ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮ, ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಢಾಕಾಗೆ ಪ್ರಯಾಣ ಬೆಳೆಸಿದ್ದಾರೆ.
ಇಂದು ನಾನು ಢಾಕಾಕ್ಕೆ ಪ್ರಯಾಣಿಸುತ್ತಿದ್ದು, ನನ್ನ ಭೇಟಿ ಭಾರತ-ಬಾಂಗ್ಲಾದೇಶ ನಡುವೆ ಸ್ನೇಹ-ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮಾರ್ಚ್ 17 ರಿಂದ 27 ರವರೆಗೆ ನಡೆಯಲಿರುವ,
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸುವರ್ಣ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮಗಳು ಮಾರ್ಚ್ 17 ರಿಂದ ಆರಂಭವಾಗಿದ್ದು, 27 ರವರೆಗೆ ನಡೆಯಲಿವೆ. 1971ರ ವಿಮೋಚನಾ ಯುದ್ಧದ ನಂತರ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂಭ್ರಮದ ಜೊತೆಗೆ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮವೂ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಢಾಕಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಬಾಂಗ್ಲಾದೇಶ-ಭಾರತದ ನಡುವಿನ 50 ವರ್ಷಗಳ ರಾಜತಾಂತ್ರಿಕ ಸಂಬಂಧದ ದ್ಯೋತಕವಾಗಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಯೋಜನೆ ಇದೆ: ಜೋ ಬೈಡನ್
"ಬಾಂಗ್ಲಾದೇಶದೊಂದಿಗಿನ ನಮ್ಮ ಸಹಭಾಗಿತ್ವವು ನಮ್ಮ ನೆರೆಹೊರೆಯ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ಬದ್ಧರಾಗಿದ್ದೇವೆ. ಪ್ರಧಾನಿ ಶೇಖ್ ಹಸೀನಾ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಬಾಂಗ್ಲಾದೇಶದ ಗಮನಾರ್ಹ ಅಭಿವೃದ್ಧಿ ಪ್ರಯಾಣವನ್ನು ನಾವು ಬೆಂಬಲಿಸುತ್ತೇವೆ." ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ನಂತರ ಉಭಯ ರಾಷ್ಟ್ರಗಳ ನಾಯಕರು ಮೂರು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ. ಕಳೆದ ವರ್ಷ ಕೋವಿಡ್-19 ನಂತರ ಪ್ರಧಾನಿಯವರ ಮೊದಲ ವಿದೇಶ ಪ್ರಯಾಣ ಇದಾಗಿದೆ.