ನವದೆಹಲಿ: 75ನೇ ಸ್ವಾತಂತ್ರ್ಯ ದಿನವಾದ ಇಂದು ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ಕೆಲ ನೂತನ ಯೋಜನೆಗಳನ್ನ ಇದೇ ವೇಳೆ ಘೋಷಿಸಿದ್ದಾರೆ.
'ಗತಿ ಶಕ್ತಿ' ಯೋಜನೆ
ಮೂಲಸೌಕರ್ಯ ಅಭಿವೃದ್ಧಿಗಾಗಿ ಪಿಎಂ ಮೋದಿ ಅವರು 100 ಲಕ್ಷ ಕೋಟಿ ರೂ. ವೆಚ್ಚದ 'ಪ್ರಧಾನ ಮಂತ್ರಿ ಗತಿ ಶಕ್ತಿ' ಯೋಜನೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಆರ್ಥಿಕತೆ ಪ್ರಗತಿ ಹಾಗೂ ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಗತಿ ಶಕ್ತಿಯು ನಮ್ಮ ಸ್ಥಳೀಯ ಉತ್ಪಾದಕರಿಗೆ ಜಾಗತಿಕವಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ. ಇದು ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದ್ದು, ಈ ಯೋಜನೆಯ 'ರಾಷ್ಟ್ರೀಯ ಮಾಸ್ಟರ್ ಪ್ಲಾನ್' ಅನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪ್ರಸ್ತುತಪಡಿಸಲು ಸಜ್ಜಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಭಜನೆಯ ನೋವು ಇನ್ನೂ ಭಾರತದ ಎದೆಯನ್ನು ಚುಚ್ಚುತ್ತಿದೆ: ಪಿಎಂ ಮೋದಿ
ರಾಷ್ಟ್ರೀಯ ಹೈಡ್ರೋಜನ್ ಮಿಷನ್
ಅಭಿವೃದ್ಧಿಯ ಹಾದಿಯಲ್ಲಿ ನಡೆಯುವಾಗ, ಭಾರತವು ಉತ್ಪಾದನೆ ಮತ್ತು ರಫ್ತು ಎರಡನ್ನೂ ಹೆಚ್ಚಿಸಬೇಕಾಗಿದೆ. ಈಗಾಗಲೇ ಭಾರತವು ತನ್ನದೇ ಆದ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನಿರ್ಮಿಸುತ್ತಿದೆ. ಇದೀಗ 'ಹಸಿರು ಜಲಜನಕ'ದ ಉತ್ಪಾದನೆ ಮತ್ತು ರಫ್ತಿಗೆ ಭಾರತವನ್ನು ಕೇಂದ್ರವಾಗಿಸುವ ಗುರಿಯೊಂದಿಗೆ 'ರಾಷ್ಟ್ರೀಯ ಹೈಡ್ರೋಜನ್ ಮಿಷನ್' ಘೋಷಿಸುತ್ತಿರುವುದಾಗಿ ಮೋದಿ ಹೇಳಿದರು. ಇಂಧನದ ಆಮದಿಗಾಗೇ ಭಾರತ ಪ್ರತಿ ವರ್ಷ 12 ಲಕ್ಷ ಕೋಟಿ ರೂ. ಮೀಸಲಿಡುತ್ತಿದೆ. ಸ್ವಾತಂತ್ರ್ಯದ ಶತಮಾನೋತ್ಸವಕ್ಕೂ ಮುನ್ನ ಆತ್ಮನಿರ್ಭರ ಭಾರತ ಅಭಿಯಾನದಡಿ ದೇಶವು ಇಂಧನ ಸ್ವಾವಲಂಬಿ ದೇಶವಾಗಿಸುವ ಪ್ರತಿಜ್ಞೆಯನ್ನು ಪಿಎಂ ಮೋದಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವ: ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ
ಇ-ಕಾಮರ್ಸ್ ಪ್ಲಾಟ್‌ಫಾರ್ಮ್
ಸ್ವಸಹಾಯ ಗುಂಪುಗಳ ಅಂದರೆ ಗ್ರಾಮೀಣ ಭಾಗದ ಕಾರ್ಮಿಕರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸರ್ಕಾರವು ಇ-ಕಾಮರ್ಸ್ ವೇದಿಕೆಗಳನ್ನು ಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಹಾಯ ಗುಂಪುಗಳಡಿ 8 ಕೋಟಿಗೂ ಹೆಚ್ಚು ಮಹಿಳೆಯರು ಉತ್ಪನ್ನಗಳನ್ನು ತಯಾರಿಸುತ್ತಾರೆ. ಇವರ ಉತ್ಪನ್ನಗಳಿಗೆ ದೇಶ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸಬೇಕು ಎಂದು ಪ್ರಧಾನಿ ಹೇಳಿದರು.