ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 8.5 ಕೋಟಿ ಅರ್ಹ ರೈತರಿಗೆ 17,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 14 ನೇ ಕಂತಿನ ಹಣವನ್ನು ಗುರುವಾರ ಬಿಡುಗಡೆ ಮಾಡಿದರು. ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಯ ಹಣವನ್ನು ಪ್ರಧಾನಿ ಬಿಡುಗಡೆ ಮಾಡಿದರು.
ಇದರ ಜೊತೆಗೆ ಪ್ರಧಾನಿ ಮೋದಿ ಅವರು 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಡಿಜಿಟಲ್ ಕ್ಷೇತ್ರದಲ್ಲಿ ಮುಕ್ತ ಮಾರುಕಟ್ಟೆಗಾಗಿ 1600 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್ಪಿಒ) ಚಾಲನೆ ನೀಡಿದರು. ಕೇಂದ್ರ ಸರ್ಕಾರ ಪಿಎಂ - ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಇಲ್ಲಿಯವರೆಗೆ ಒಟ್ಟು 2.50 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ 13 ನೇ ಕಂತಿನ 5 ತಿಂಗಳ ಬಳಿಕ 14 ನೇ ಕಂತನ್ನು ನೀಡಲಾಗಿದೆ.
ಏನಿದು ಪಿಎಂ ಕಿಸಾನ್ ಸಮ್ಮಾನ್ ಯೋಜನೆ?: ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಈ ಯೋಜನೆಯನ್ನು ಜಾರಿ ಮಾಡಿತು. 2018 ರಿಂದಲೇ ಪೂರ್ವಾನ್ವಯವಾಗುವಂತೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ರೈತಲು ಬೀಜ, ಗೊಬ್ಬರ, ಕಟಾವಿಗೆ ಹಣವನ್ನು ಬಳಸಿಕೊಳ್ಳಲು ಅನುವಾಗುವಂತೆ ಯೋಜನೆಯಡಿಯ ಫಲಾನುಭವಿಗಳಿಗೆ ವರ್ಷದಲ್ಲಿ ಮೂರು ಬಾರಿ 2 ಸಾವಿರ ರೂಪಾಯಿಯಂತೆ ನೀಡಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ನಲ್ಲಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಪಟ್ಟಿಯಲ್ಲಿ ಹೆಸರಿದೆಯಾ ಹೀಗೆ ನೋಡಿ: ಮೊದಲಿಗೆ PMkisn.gov.in ನಲ್ಲಿ ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲಿ ರೈತರ ವಿಭಾಗಕ್ಕೆ ಹೋಗಿ ಮತ್ತು ಫಲಾನುಭವಿಗಳ ಪಟ್ಟಿಯನ್ನು ಕ್ಲಿಕ್ ಮಾಡಿ. ರಾಜ್ಯ, ಜಿಲ್ಲೆ, ತಹಸಿಲ್, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ತೆರೆಯುವ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.
ಹಣ ಬಂದಿಲ್ಲವೇ ಇಲ್ಲಿ ದೂರು ನೀಡಿ: ಕಂತಿನ ಹಣ ಬಂದಿಲ್ಲವಾದಲ್ಲಿ, ಪ್ರಧಾನಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾದರೆ, pmkisan-ict@gov.in ಅಧಿಕೃತ ಇಮೇಲ್ ಮೂಲಕ ದೂರು ದಾಖಲಿಸಿ. ಅಲ್ಲದೇ, ಸಹಾಯವಾಣಿ ಸಂಖ್ಯೆ 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ: ಕೆಂಪು ಡೈರಿ ಕಾಂಗ್ರೆಸ್ ಪಕ್ಷದ ಸೋಲಿನ ಕರೆ ಗಂಟೆ: ರಾಜಸ್ಥಾನದ ಭವಿಷ್ಯ ನುಡಿದ ಪ್ರಧಾನಿ ಮೋದಿ