ಭೂಮಿ, ಗಾಳಿ, ನೀರು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮತ್ತು ಬಳಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಪ್ಲಾಸ್ಟಿಕ್ ಮನುಷ್ಯನ ದೇಹ ಹೊಕ್ಕರೆ ಇದು ಮಾರಣಾಂತಿಕ ಸಮಸ್ಯೆಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನದಲ್ಲಿ ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ನ್ಯೂಟ್ರಿಷಿಯನ್ (ಎನ್ಐಎನ್) ಎಚ್ಚರಿಕೆ ನೀಡಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕ ಬಿಪಿಎ, ಗರ್ಭಿಣಿಯರ ದೇಹವನ್ನು ಪ್ರವೇಶಿಸಿದಾಗ ಭವಿಷ್ಯದ ಗಂಡು ಸಂತಾನದಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಪ್ಲಾಸ್ಟಿಕ್ ಉತ್ಪನ್ನಗಳು ಗಂಭೀರ ಅಡ್ಡಪರಿಣಾಮವನ್ನು ಬೀರುವ ಹಿನ್ನೆಲೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಯಾವ ರೀತಿ ಪರಿಸರದಲ್ಲಿ ಹೆಚ್ಚಾಗಿ ಪ್ರಾಣಿಗಳ ದೇಹ ಸೇರುತ್ತಿದೆ ಎಂದರೆ ನಮ್ಮ ದೇಶದಲ್ಲಿನ ಪ್ರತಿ ಹಸು ಮತ್ತು ಎಮ್ಮೆಗಳ ಹೊಟ್ಟೆಯಲ್ಲಿ 30 ಕೆಜಿ ಪ್ಲಾಸ್ಟಿಕ್ ಇದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಮೈಕ್ರೋಪ್ಲಾಸ್ಟಿಕ್ ಮತ್ತು ನ್ಯಾನೋಪ್ಲಾಸ್ಟಿಕ್ಗಳು ಸಾಗರದ ಜೀವಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದು, ಇದನ್ನು ಸೇವಿಸುವ ಜನರ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಕರಾವಳಿ ತೀರದ ಜನರ ಶ್ವಾಸಕೋಶ, ಯಕೃತ್, ಮೂತ್ರದಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಗಾಳಿ ಅಥವಾ ಭೂಮಿಯ ಮೇಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಹೀಗೆ ಮಾನವನ ದೇಹ ಸೇರುತ್ತಿದ್ದು, ಇದು ಡಿಎನ್ಎ ಮತ್ತು ಕೋಶಗಳನ್ನು ಹಾನಿ ಮಾಡುತ್ತಿದೆ ಎಂಬ ಬಗ್ಗೆ ಈ ಹಿಂದಿನ ಸಂಶೋಧನೆಗಳು ಕೂಡ ಎಚ್ಚರಿಸಿವೆ. ನೆದರ್ಲ್ಯಾಂಡ್ನ ವಿಜ್ಞಾನಿಗಳು ಮೈಕ್ರೋಪ್ಲಾಸ್ಟಿಕ್ಗಳು ಮಾನವನ ರಕ್ತ ನಾಳವನ್ನು ಪ್ರವೇಶಿಸುತ್ತಿದೆ ಎಂದು ದೃಢಪಡಿಸಿದ್ದಾರೆ. ಇತ್ತೀಚಿನ ಚೀನಾ ಅಧ್ಯಯನದಲ್ಲಿ ಪ್ಲಾಸ್ಟಿಕ್ನ ಇರುವಿಕೆ ಹೃದಯದಲ್ಲೂ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷಿಯನ್ನ ಇತ್ತೀಚಿನ ಸಂಶೋಧನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಭ್ರೂಣಗಳ ಬೆಳವಣಿಗೆಯಲ್ಲಿ ಅಡ್ಡಿ ಮಾಡುತ್ತಿದ್ದು, ಇದಕ್ಕೆ ತತ್ಕ್ಷಣದಲ್ಲಿ ಪರಿಹಾರ ಕಾರ್ಯ ನಡೆಸಬೇಕಿದೆ ಎಂದು ಬೆಳಕು ಚೆಲ್ಲಿದ್ದಾರೆ.
ಇಂದು ಸಮಸ್ಯೆಯಾಗಿ ಬೆಳೆದಿರುವ ಈ ಪ್ಲಾಸ್ಟಿಕ್ ಅನ್ನು ಶತಮಾನಗಳ ಹಿಂದೆ ಲಿಯೋ ಬೇಕ್ಲ್ಯಾಂಡ್ ಎಂಬ ರಾಸಾಯನಶಾಸ್ತ್ರಜ್ಞ ಪ್ರಯೋಗದ ಮೂಲಕ ಕಂಡುಹಿಡಿದ. ಕಾಫಿಯಿಂದ ಕಂಪ್ಯೂಟರ್ವರೆಗೆ ಇದು ಈಗ ಅನೇಕ ವಿಧದಲ್ಲಿ ಲಭ್ಯವಿದೆ. ಈ ಅಂದಾಜಿನ ಪ್ರಕಾರ 2050ರಲ್ಲಿ ಸಾಗರದಲ್ಲಿ ಸಮುದ್ರದಲ್ಲಿ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ಇರಲಿದ್ದು, ಇದು ಜನಸಂಖ್ಯೆಗೆ ಬೆದರಿಕೆ ಒಡ್ಡಲಿದೆ. ದೀರ್ಘ ಕಾಲ ಬದುಕುವುದು ಪಾಪ ಎಂಬ ಮಾತು ಕೂಡ ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕೂಡ ಅನ್ವಯವಾಗುತ್ತದೆ. ಬಾಳೆಹಣ್ಣಿನ ಸಿಪ್ಪೆ 20 ದಿನದಲ್ಲಿ ಮಣ್ಣಿನಲ್ಲಿ ಕರಗಿದರೆ, ಕಬ್ಬಿನ ಜಲ್ಲೆಗೆ 2 ತಿಂಗಳ ಅವಧಿಗೆ ಬೇಕು. ಆದರೆ ಪ್ಲಾಸ್ಟಿಕ್ಗೆ ಸಾವಿರಾರು ವರ್ಷ ಬೇಕಾಗುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದಿಂದ ಉಂಟಾಗುವ ವಿನಾಶ ದೊಡ್ಡದಿದೆ. ಇದು ಪ್ರವಾಹಕ್ಕೆ ಕೂಡ ಕಾರಣವಾಗುತ್ತದೆ. ಭೂಮಿಯ ಮೇಲಿನ ಪ್ಲಾಸ್ಟಿಕ್ಗಳು ಮಳೆ ನೀರಿನ ಹರಿವಿಗೆ ತಡೆಯೊಡ್ಡುತ್ತದೆ. ಅಲ್ಲದೇ ಇದು ಹಕ್ಕಿಗಳು ಆಮೆಗಳು ಮತ್ತು ಸಾಗರ ಜೀವಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.
ಮಾನವರಿಗೆ ಮತ್ತು ಪರಿಸರದ ಮೇಲೆ ಹೆಚ್ಚಿನ ಅಡ್ಡಪರಿಣಾಮ ಬೀರುವ ಪ್ಲಾಸ್ಟಿಕ್ ಅನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆಯಾದರೂ ಇದು ಯಶಸ್ವಿಯಾಗಿರುವುದು ಕೇವಲ ಸಿಕ್ಕೀಂನಲ್ಲಿ ಮಾತ್ರ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಕೂಡ ಪ್ರಮುಖವಾಗಿದೆ. ದಶಕದ ಹಿಂದೆ ಈ ಬಗ್ಗೆ ಸುಪ್ರೀಂಕೋರ್ಟ್ ನಾವು ಪ್ಲಾಸ್ಟಿಕ್ ಬಾಂಬ್ ತಯಾರಿಸುತ್ತಿದ್ದೇವೆ ಎಂದು ಎಚ್ಚರಿಸಿದೆ.
ಪ್ಲಾಸ್ಟಿಕ್ ಬಳಕೆ ಮಾಡಿಕೊಂಡು ರಸ್ತೆ ನಿರ್ಮಿಸುವ ಮೂಲಕ ನೆದರ್ಲ್ಯಾಂಡ್ ಇದರ ವಿಲೇವಾರಿಗೆ ಪರ್ಯಾಯ ಮಾರ್ಗವನ್ನು ಹುಡುಕಿದೆ. ಇದು ಯುಕೆಯಂತಹ ದೇಶದಲ್ಲೂ ಗಮನ ಸೆಳೆಯುತ್ತಿದೆ. ಡೆಹ್ರಾಡೂನ್ನ ಇಂಡಿಯನ್ ಪೆಟ್ರೋಲಿಯಂ ಇನ್ಸುಟಿಟ್ಯೂಟ್ನಲ್ಲಿ ಕೂಡ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗಿದೆ. ತೆಲಂಗಾಣದ ಯುವ ಇಂಜಿನಿಯರ್ ಒಬ್ಬ ಹತ್ತು ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ 6000 ಲೀಟರ್ ಡಿಸೇಲ್ ಅನ್ನು ಉತ್ಪಾದಿಸಿದ್ದಾನೆ. ಈ ರೀತಿ ಹಲವು ಉದಾಹರಣೆ ಇದೆ. ಪ್ರತಿ ವರ್ಷ 34 ಲಕ್ಷ ಟನ್ ತ್ಯಾಜ್ಯದಲ್ಲಿ ಮೂರನೇ ಒಂದು ಭಾಗ ಮರುಬಳಕೆ ಮಾಡಲಾಗುತ್ತಿದೆ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರೆಸಬೇಕಿದೆ.
ಇದನ್ನೂ ಓದಿ: 2050ರ ವೇಳೆಗೆ ಸಾಗರದಲ್ಲಿ ಮೀನಿಗಿಂತ ಹೆಚ್ಚಿರಲಿದೆ ಪ್ಲಾಸ್ಟಿಕ್; ಇದಕ್ಕೆಲ್ಲ ಬೇಕಿದೆ ಪರಿಹಾರ