ತಿರುವನಂತಪುರಂ: ಏಕರೂಪ ನಾಗರಿಕ ಸಂಹಿತೆ (UCC)ಯ ಬಗ್ಗೆ ಕಾಂಗ್ರೆಸ್ ಪಕ್ಷದ ಮೌನವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರಶ್ನಿಸಿದ್ದಾರೆ. ಯುಸಿಸಿ ವಿಚಾರದಲ್ಲಿ ಕಾಂಗ್ರೆಸ್ ಅನುಮಾನಾಸ್ಪದ ಮೌನವಹಿಸಿದ್ದು, ಸಂಘ ಪರಿವಾರ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಏಕರೂಪ ನಾಗರಿಕ ಸಂಹಿತೆ ಕುರಿತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಪಷ್ಟ ನಿಲುವನ್ನು ಹೊಂದಿದೆಯೇ ಎಂದು ಕೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ನ ಅನುಮಾನಾಸ್ಪದ ಮೌನವು ಮೋಸದಾಯಕ. ಭಾರತದ ಬಹುತ್ವದ ಮೇಲೆ ಸಂಘಪರಿವಾರದ ಹೇರಿಕೆಗಳನ್ನು ವಿರೋಧಿಸಲು ಮತ್ತು ಸಂಘಪರಿವಾರದ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದೆಯೇ?. ಚುನಾವಣಾ ರಾಜಕೀಯದಲ್ಲಿ ಬಿಜೆಪಿಯನ್ನು ವಿರೋಧಿಸುವುದನ್ನು ಹೊರತುಪಡಿಸಿ, ದೇಶದ ಉಳಿವಿನ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಸಂಘಪರಿವಾರದ ವಿರುದ್ಧ ನಿಲ್ಲಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದ್ದಾರೆ.
ಈ ವಿಚಾರವಾಗಿ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಪ್ರತಿಕ್ರಿಯೆ ನೀಡಿ, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ, ನಾವು ವೈವಿಧ್ಯತೆಯ ಏಕರೂಪತೆಯನ್ನು ಒಪ್ಪುವುದಾಗಿ ಹೇಳಿದ್ದೇವೆ. ಹಾಗಾಗಿ ಯಾವುದೇ ಕಾನೂನು ಜಾರಿಗೆ ತರುವ ಮೊದಲು ಈ ಕಾನೂನು ತಮಗೆ ವಿರುದ್ಧ ಎಂದು ಯಾರಿಗೂ ಅನಿಸಬಾರದು. ಎಲ್ಲ ಪಕ್ಷಗಳ ನಡುವೆ ದೃಢವಾದ ಒಮ್ಮತ ಮೂಡಬೇಕು. ಈ ವಿಚಾರದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಹೇಳಿದ್ದರು. ಆದರೆ, ಈ ವಿಚಾರದಲ್ಲಿ ಪಕ್ಷದ ತೀರ್ಮಾನದಂತೆ ಹೋಗುತ್ತೇನೆ ಎಂದೂ ತಿಳಿಸಿದ್ದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, "ಒಂದು ಕುಟುಂಬವು ರಕ್ತ ಸಂಬಂಧಗಳಿಂದ ಒಟ್ಟಿಗೆ ಹೆಣೆದಿದೆ. ಒಂದು ರಾಷ್ಟ್ರವನ್ನು ಸಂವಿಧಾನವು ರಾಜಕೀಯ-ಕಾನೂನುನಿಂದ ಒಟ್ಟುಗೂಡಿಸುತ್ತದೆ. ಹಾಗೆಯೆ ಕುಟುಂಬದಲ್ಲಿಯೂ ಸಹ ವೈವಿಧ್ಯತೆಯಿದೆ. ಭಾರತದ ಸಂವಿಧಾನವು ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಗುರುತಿಸಿದೆ. ಯುಸಿಸಿಯು ಕಾನೂನು ಮಹತ್ವಾಕಾಂಕ್ಷೆಯದ್ದಾಗಿದೆ. ಆದರೆ ಅಜೆಂಡಾ-ಚಾಲಿತ ಬಹುಮತದ ಸರ್ಕಾರದಿಂದ ಇದನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ದೇಶದಲ್ಲಿ ನಿರುದ್ಯೋಗ, ಅಪರಾಧಗಳು, ತಾರತಮ್ಯ ತಾಂಡವವಾಡುತ್ತಿದ್ದು, ಇದರಿಂದ ಗಮನ ಬೇರೆಡೆ ಸೆಳೆಯಲು ಏಕರೂಪ ನಾಗರಿಕ ಸಂಹಿತೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಜನರು ಜಾಗೃತರಾಗಿರಬೇಕು. ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿರುವ ಬಿಜೆಪಿ ಮತದಾರರನ್ನು ಸೆಳೆದು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ನಿಯೋಜಿಸುತ್ತಿದೆ ಎಂದು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಕುರಿತು ಈ ಹಿಂದೆ ಎಐಸಿಸಿ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರದ ಗುಂಪು ಸಭೆ ನಡೆಸಿತ್ತು.
ಇದನ್ನೂ ಓದಿ: ಮೋದಿ ಉಪನಾಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆ: ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್