ಜೈಪುರ (ರಾಜಸ್ಥಾನ): ರಾಜಸ್ಥಾನದ ಉಪಮುಖ್ಯಮಂತ್ರಿಗಳಾಗಿ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಅವರು ಪ್ರಮಾಣವಚನ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಶನಿವಾರ ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಡಿಸಿಎಂ ಹುದ್ದೆ ಅಸಂವಿಧಾನಿಕ ಹಾಗೂ ಸಂವಿಧಾನವು ಈ ಹುದ್ದೆಗೆ ಮಾನ್ಯತೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಕೀಲ ಓಂಪ್ರಕಾಶ್ ಸೋಲಂಕಿ ಎಂಬುವವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಉಪ ಮುಖ್ಯಮಂತ್ರಿಗಳಾದ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಅವರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಪಿಐಎಲ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಹುದ್ದೆಗಳಿಗೆ ನೇಮಕವನ್ನು ರದ್ದುಗೊಳಿಸುವಂತೆ ಕೋರಿರುವ ವಕೀಲ ಸೋಲಂಕಿ, ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕ ಮತ್ತು ಸಂವಿಧಾನದಲ್ಲಿ ಅಂತಹ ಯಾವುದೇ ಹುದ್ದೆಯನ್ನು ಉಲ್ಲೇಖಿಸಿಲ್ಲ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ಬಿಜೆಪಿ ನಾಯಕ ಭಜನ್ ಲಾಲ್ ಶರ್ಮಾ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಇದೇ ಸಮಾರಂಭದಲ್ಲಿ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಸಮಂದ್ ಸಂಸದೆಯಾಗಿದ್ದ ದಿಯಾ ಕುಮಾರಿ ಪಕ್ಷದಲ್ಲಿ ರಜಪೂತ ಸಮುದಾಯ ಪ್ರಮುಖ ನಾಯಕಿ ಆಗಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಜೈಪುರದ ವಿದ್ಯಾಧರ್ ನಗರ ಕ್ಷೇತ್ರದಿಂದ 71,368 ಮತಗಳ ಅಂತರದಿಂದ ಗೆದ್ದಿದ್ದಾರೆ.
ಜೈಪುರ ಮಹಾರಾಜ ಸವಾಯಿ ಭವಾನಿ ಸಿಂಗ್ ಪುತ್ರಿಯಾದ 51 ವರ್ಷದ ಬಿಜೆಪಿ ನಾಯಕಿ ದಿಯಾ ಕುಮಾರಿ 2013ರಲ್ಲಿ ಸವಾಯಿ ಮಾಧೋಪುರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಮತ್ತೊಂದೆಡೆ, ಡಾ.ಪ್ರೇಮ್ಚಂದ್ ಬೈರವ ದುಡು ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇವರು ಪರಿಶಿಷ್ಟ ವರ್ಗ (ಎಸ್‌ಸಿ) ವರ್ಗಕ್ಕೆ ಸೇರಿದ್ದು, ಡಾಕ್ಟರೇಟ್ ಪದವಿ ಹೊಂದಿದ್ದಾರೆ.
ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ, ಮಿಜೋರಾಂ ಸೇರಿ ಪಂಚ ರಾಜ್ಯಗಳ ಚುನಾವಣೆ ಪೈಕಿ ರಾಜಸ್ಥಾನದಲ್ಲೂ ಚುನಾವಣೆ ನಡೆದಿತ್ತು. ರಾಜ್ಯದ ಒಟ್ಟು 200 ಕ್ಷೇತ್ರಗಳಲ್ಲಿ 199 ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 69 ಸ್ಥಾನಗಳಿಗೆ ಕುಸಿದಿದೆ. ಉಳಿದ ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಧನದ ಹಿನ್ನಲೆಯಲ್ಲಿ ಆ ಮಾತ್ರ ಚುನಾವಣೆ ಮುಂದೂಡಲಾಗಿದೆ.
ಇದನ್ನೂ ಓದಿ: 57ನೇ ಹುಟ್ಟುಹಬ್ಬದಂದೇ ರಾಜಸ್ಥಾನದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭಜನ್ ಲಾಲ್ ಶರ್ಮಾ