ಫಾಗ್ವಾರ (ಪಂಜಾಬ್): ಎರಡನೇ ಹಂತದ ಕೊರೊನಾ ಹಾವಳಿ ಜೋರಾಗಿರುವ ಕಾರಣ ದೇಶದಲ್ಲಿ ಬಹುತೇಕ ಲಾಕ್ಡೌನ್ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು ಮತ್ತೊಮ್ಮೆ ಸಂಕಷ್ಟಕ್ಕೊಳಗಾಗಿದ್ದು, ವ್ಯಾಪಾರವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ.
ಇದರ ಮಧ್ಯೆ ಕೆಲವೊಂದು ಪ್ರದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು ದರ್ಪದಿಂದ ನಡೆದುಕೊಳ್ಳುತ್ತಿದ್ದು, ಇದು ವ್ಯಾಪಾರಸ್ಥರಿಗೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದೆ. ಸದ್ಯ ಪಂಜಾಬಿನ ಫಾಗ್ವಾರ ಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದೆ.
ಗಸ್ತು ತಿರುಗುತ್ತಿದ್ದ ವೇಳೆ ಮಾರುಕಟ್ಟೆಯಲ್ಲಿ ತರಕಾರಿ ತುಂಬಿದ್ದ ಬುಟ್ಟಿಗೆ ಪೊಲೀಸ್ ಅಧಿಕಾರಿ ಬೂಟು ಕಾಲಿನಿಂದ ಒದ್ದಿರುವ ಘಟನೆ ಪಂಜಾಬ್ನ ಫಾಗ್ವಾರದಲ್ಲಿ ನಡೆದಿದೆ. ಫಾಗ್ವಾರ ಠಾಣಾಧಿಕಾರಿ ನವದೀಪ್ ಸಿಂಗ್ (ಎಸ್ಹೆಚ್ಒ) ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆಕ್ಸಿಜನ್ ಸಾಗಣೆ ವೇಳೆ ಸೋರಿಕೆ.. ವ್ಯರ್ಥವಾಯ್ತು ನೂರಾರು ಟನ್ 'ಪ್ರಾಣವಾಯು'
ಘಟನೆ ಬಗ್ಗೆ ಡಿಜಿಪಿ ದಿನಕರ ಗುಪ್ತಾ ಅವರ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಠಾಣಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇಂತಹ ದುಷ್ಕೃತ್ಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ರೀತಿ ದರ್ಪ ತೋರಿಸುವವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿಜಿಪಿ ಎಚ್ಚರಿಸಿದ್ದಾರೆ.