ಚೈಬಾಸ್(ಜಾರ್ಖಂಡ್): ಜಿಲ್ಲೆಯ ಮೋಹನಪುರ್ ಪೊಲೀಸ್ ಠಾಣೆಯ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ಅದೇ ಶಾಲೆಯ ಶಿಕ್ಷಕಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಮುಖ್ಯ ಶಿಕ್ಷಕನಿಗೆ ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಮುಖ್ಯ ಶಿಕ್ಷಕನಾಗಿ(ಮುಖ್ಯೋಪಾಧ್ಯಾಯ) ಸೇವೆ ಸಲ್ಲಿಸುತ್ತಿದ್ದ ರಮೇಶ್ ಚಂದ್ರ ಮಹತೋ, ಶಿಕ್ಷಕಿಯೊಬ್ಬರಿಗೆ ದೈಹಿಕವಾಗಿ ತೊಂದರೆ ನೀಡುತ್ತಿದ್ದನಂತೆ. ಇದರ ಜೊತೆಗೆ ಅವಳಿಗೆ ನಿತ್ಯ ಮಾನಸಿಕ ತೊಂದರೆ ನೀಡಿ ನೇಮಕಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದನಂತೆ. ಇದರ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಶಿಕ್ಷಕನ ಕೊರಳಲ್ಲಿ ಶೂ ಮತ್ತು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದಾರೆ.
2003ರಿಂದ ಮಹಿಳಾ ಶಿಕ್ಷಕಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಅಂದಿನಿಂದಲೂ ನಿತ್ಯ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನಂತೆ. ಜೊತೆಗೆ ಅವರ ನೇಮಕಾತಿ ಅಕ್ರಮವಾಗಿ ನಡೆದಿದೆ ಎಂದು ಪ್ರಶ್ನೆ ಮಾಡುತ್ತಿದ್ದ. ಆದರೆ, 2020ರಲ್ಲಿ ರಮೇಶ್ ಚಂದ್ರ ಮುಖ್ಯ ಶಿಕ್ಷಕನಾಗಿ ನಿಯೋಜನೆಗೊಳ್ಳುತ್ತಿದ್ದಂತೆ ಶಿಕ್ಷಕಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲು ಮುಂದಾಗಿದ್ದಾನೆ.
ಇದನ್ನೂ ಓದಿರಿ: ಬಂಗಾರದ ಬೆಲೆಯಲ್ಲಿ ದಾಖಲೆಯ ಇಳಿಕೆ..ಬೆಂಗಳೂರಲ್ಲಿ 10 ಗ್ರಾಂಗೆ ಎಷ್ಟು..?
ಇದೇ ವಿಚಾರವಾಗಿ ಇಬ್ಬರ ನಡುವೆ ಅನೇಕ ಸಲ ಜಗಳ ಸಹ ನಡೆದಿತ್ತು. ಇದರ ಮಧ್ಯೆ 50 ಸಾವಿರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದನಂತೆ. ತಡರಾತ್ರಿ ಕೆಲವೊಮ್ಮೆ ಶಾಲೆಗೆ ಕರೆದು ದೈಹಿಕವಾಗಿ ಹಿಂಸಿಸುತ್ತಿದ್ದನು ಅಂತ ಶಿಕ್ಷಕಿ ದೂರಿದ್ದಾಳೆ.
ಘಟನೆ ಬಗ್ಗೆ ಶಿಕ್ಷಕಿ ಗ್ರಾಮದಲ್ಲಿ ಈ ವಿಚಾರ ಹೇಳಿಕೊಳ್ಳುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿಕೊಂಡು ಆತನಿಗೆ ಬುದ್ಧಿ ಕಲಿಸಿದ್ದು, ಕೊರಳಲ್ಲಿ ಚಪ್ಪಲಿ ಹಾಗೂ ಶೂವಿನ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪೊಲೀಸ್ ಪ್ರಕರಣ ದಾಖಲಾಗಿಲ್ಲ.