ತಿರುವನಂತಪುರಂ (ಕೇರಳ): ಜನರ ನಡುವೆ ಅದೇನೇ ವೈಮನಸ್ಸಿದ್ದರೂ ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕು. ಅದರಂತೆ ಸಂಬಂಧವೇ ಇಲ್ಲದ ಸಾವಿರಾರು ಮಂದಿ ಓರ್ವ ಬಾಲಕನ ಜೀವ ಉಳಿಸಲು ಇಲ್ಲೊಂದೆಡೆ ಧಾವಿಸಿ ಬರುತ್ತಿದ್ದಾರೆ. ಹೌದು, ಅಪರೂಪದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ 7 ವರ್ಷದ ಬಾಲಕ ಶ್ರೀನಂದ್‌ಗೆ ಹೊಂದಿಕೆಯಾಗುವ ಕಾಂಡಕೋಶ/ಬೀಜಕೋಶ ದಾನಿಯನ್ನು ಹುಡುಕುತ್ತಿದ್ದು, ತಿರುವನಂತಪುರಂನಲ್ಲಿರುವ ಮಾದರಿ ಸಂಗ್ರಹಣಾ ಕೇಂದ್ರದಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ.
ಶ್ರೀನಂದ್ ತಿರುವನಂತಪುರದ ಉಳ್ಳೂರು ನಿವಾಸಿಗಳಾದ ರಂಜಿತ್ ಬಾಬು, ಆಶಾ ದಂಪತಿಯ ಪುತ್ರ. ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನಿಗೆ ಎರಡು ತಿಂಗಳ ಹಿಂದೆ ರಕ್ತದ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಪರಿಣಾಮ, ದೇಹದಲ್ಲಿರುವ ಕಾಂಡಕೋಶಗಳು ನಾಶವಾಗುತ್ತಿವೆ.
ಮೂಳೆ ಮಜ್ಜೆಯು ಇನ್ನು ಮುಂದೆ ರಕ್ತ ಉತ್ಪಾದಿಸುವುದಿಲ್ಲ. ಸದ್ಯಕ್ಕಂತೂ ಬಾಲಕ ಸಾಮಾನ್ಯ ರಕ್ತ ವರ್ಗಾವಣೆಯಿಂದ ಬದುಕುಳಿದಿದ್ದಾನೆ. ಸ್ಟೆಮ್ ಸೆಲ್ ಥೆರಪಿಯಿಂದ ಮಾತ್ರ ಬದುಕುಳಿಯುವುದು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕನ ಕುಟುಂಬದಿಂದ ಮತ್ತು ವಿಶ್ವಕಾಂಡ ಕೋಶ ದಾನಿಗಳ ಸಂಸ್ಥೆಯಿಂದ ಈವರೆಗೆ ಸರಿಹೊಂದುವ ದಾನಿಯನ್ನು ಹುಡುಕುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹಾಗಾಗಿ, ಇದೀಗ ರಕ್ತದಾನಿಗಳ/ರಕ್ತದಾನ ಸಂಸ್ಥೆಯು ಕೇರಳದ ರಾಜಧಾನಿಯಲ್ಲಿ ಅಭಿಯಾನ ಶುರು ಮಾಡಿದೆ. ಮಾಧ್ಯಮಗಳ ಮೂಲಕವೂ ಬಾಲಕನ ಸ್ಥಿತಿಗತಿ ತಿಳಿದು ಸಾವಿರಾರು ಜನರು ಕೇಂದ್ರಕ್ಕೆ ಬರುತ್ತಿದ್ದಾರೆ.
ಇದನ್ನೂ ಓದಿ: ಮದುವೆ ನಿಶ್ಚಿತಾರ್ಥಕ್ಕೆ ಹೊರಟ ಬಸ್ ಪಲ್ಟಿ: ಮಗು ಸೇರಿ 8 ಮಂದಿ ಸಾವು, 45 ಜನರಿಗೆ ಗಾಯ
ಈ ಕೇಂದ್ರದಲ್ಲಿ ದಾನಿಗಳ ಲಾಲಾರಸದ ಮಾದರಿಗಳನ್ನು ಸಂಗ್ರಹಿಸಿ HLA-ಟೈಪಿಂಗ್ ಪರೀಕ್ಷೆ ಮೂಲಕ ಪರಿಶೀಲಿಸಲಾಗುತ್ತಿದೆ. ಪರೀಕ್ಷೆಯ ಫಲಿತಾಂಶ 45 ದಿನಗಳ ನಂತರ ಬರಲಿದೆ. ಸಂಘಟಕರು ಶ್ರೀನಂದ್‌ಗೆ ಹೊಂದಿಕೆಯಾಗುವ ಕಾಂಡಕೋಶ ದಾನಿಯನ್ನು ಹುಡುಕುವ ವಿಶ್ವಾಸದಲ್ಲಿದ್ದಾರೆ.
18 ರಿಂದ 50 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿ ದಾನಿಯಾಗಬಹುದು. ಮಾದರಿಗಳು ಶ್ರೀನಂದ್‌ನ ಮಾದರಿಯೊಂದಿಗೆ ಹೊಂದಾಣಿಕೆಯಾದರೆ ದಾನಿಯು ಬಾಲಕನ ಚಿಕಿತ್ಸೆಗಾಗಿ ತನ್ನ ಒಂದು ಬಾಟಲಿ ರಕ್ತವನ್ನು ಮಾತ್ರ ನೀಡಬೇಕಾಗುತ್ತದೆ. ರಕ್ತದಾನಿ ಸಂಸ್ಥೆಯು ದಾನಿಗಳ ಪರೀಕ್ಷಾ ಫಲಿತಾಂಶಗಳನ್ನು ಶೀಘ್ರ ಪ್ರಕಟಿಸುವುದಾಗಿ ಹೇಳಿದೆ.