ಬೆಂಗಳೂರು : ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳನ್ನು ಪಾಲಿಸದ ಟ್ವಿಟರ್‌ನ ದಂಡನೆಗೆ ಗುರಿ ಮಾಡಬೇಕು ಎಂದು ಐಟಿ ಉದ್ಯಮದ ಹಿರಿಯ ಟಿ ವಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ ಸೈದ್ಧಾಂತಿಕ, ಪಕ್ಷಪಾತದ ಸಾಮಾಜಿಕ ಜಾಲತಾಣವಾಗಿದೆ.
ಟ್ವಿಟರ್ ತಟಸ್ಥವಾಗಿಲ್ಲ ಎಂದು ಪೈ ಆರೋಪಿಸಿದರು. ಕಳೆದ ಮೇ 26ರಿಂದ ಜಾರಿಗೆ ಬಂದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ. ಹೀಗಾಗಿ, ಸರ್ಕಾರ ಕಾನೂನಿನ ನಿಯಮವನ್ನು ಜಾರಿಗೊಳಿಸಬೇಕು, ಮಾರ್ಗಸೂಚಿಗಳನ್ನು ಪಾಲನೆ ಮಾಡದ ಟ್ವಿಟರ್‌ನ ದಂಡಿಸಬೇಕು, ನಿಯಮ ಪಾಲನೆ ಮಾಡುವುದಕ್ಕೆ ಸರ್ಕಾರ ಟ್ವಿಟರ್‌ಗೆ ಮನವಿ ಮಾಡುವ ಅಗತ್ಯವಿಲ್ಲ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ಸಾಮಾಜಿಕ ಜಾಲತಾಣದ ಸಂಸ್ಥೆಗಳೂ ಹೊಸ ನಿಯಮ, ಮಾರ್ಗಸೂಚಿಗಳ ಪ್ರಕಾರ ನಿಯಮಗಳ ಪಾಲನೆ ಮಾಡುತ್ತಿವೆ. ಟ್ವಿಟರ್ ವಿಶೇಷವೇನು ಅಲ್ಲ. ಯಾವುದೇ ಎಂಎನ್‌ಸಿಗಳಿಗಿಂತಲೂ ದೇಶದ ಸಾರ್ವಭೌಮತ್ವ ಹಾಗೂ ಕಾನೂನುಗಳು ಮುಖ್ಯವಾಗಿರುತ್ತದೆ ಎಂದು ಪೈ ತಿಳಿಸಿದ್ದಾರೆ. ಸ್ಪರ್ಧೆಯನ್ನು ಉತ್ತೇಜಿಸುವ ಮೂಲಕ ಮತ್ತು ಗ್ರಾಹಕರನ್ನು ರಕ್ಷಿಸುವ ಮುಕ್ತ ನ್ಯಾಯಯುತ ನಿಯಮಗಳನ್ನು ಹೊಂದುವ ಮೂಲಕ ಭಾರತವು ಇನ್ನು ಮುಂದೆ ಜಾಗತಿಕ ತಂತ್ರಜ್ಞಾನದ ಏಕಸ್ವಾಮ್ಯದ ಕರುಣೆಗೆ ಒಳಗಾಗುವುದಿಲ್ಲ ಎಂದು ಸರ್ಕಾರ ಒತ್ತಿ ಹೇಳಬೇಕು.
ಹೊಸ ಮಾರ್ಗಸೂಚಿಗಳ ಪಾಲನೆಗೆ ಎಲ್ಲಾ ಸಂಸ್ಥೆಗಳಿಗೂ ಸಾಕಷ್ಟು ಸಮಯ ನೀಡಲಾಗಿತ್ತು. ಟ್ವಿಟರ್ ಸೈದ್ಧಾಂತಿಕ, ಪಕ್ಷಪಾತದ ಜಾಲತಾಣವಾಗಿ ಬದಲಾಗಿದೆ. ತಟಸ್ಥ ನಿಲುವನ್ನು ಪಾಲಿಸುತ್ತಿಲ್ಲ, ಟ್ವಿಟರ್ ಪ್ರಾರಂಭವಾದಾಗ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಜಾಗತಿಕ ಟೆಕ್ ಏಕಚಕ್ರಾಧಿಪತ್ಯದ ಅಧೀನಕ್ಕೆ ಒಳಪಡದೇ ಇರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಹಾಗೂ ಗ್ರಾಹರ ಸುರಕ್ಷತೆಗೆ ನ್ಯಾಯೋಚಿತ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಪೈ ಒತ್ತಾಯಿಸಿದ್ದಾರೆ.