ಶ್ರೀನಗರ(ಜಮ್ಮು ಕಾಶ್ಮೀರ): ಡಿಲಿಮಿಟೇಶನ್ ಆಯೋಗದ ಸಭೆಯಿಂದ ತಾನು ಹೊರಗೆ ಉಳಿಯುವುದಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತಿಳಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಕ್ಷೇತ್ರಗಳ ವಿಂಗಡಣೆ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆಯಿದೆ.
ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ರಚನೆಯಾದ ಡಿಲಿಮಿಟೇಷನ್ ಆಯೋಗ ಮಂಗಳವಾರ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿನ ರಾಜಕೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದೆ.
ಈ ಹಿನ್ನೆಲೆಯಲ್ಲಿ ನಾವು ಡಿಲಿಮಿಟೇಷನ್ ಆಯೋಗದ ಪ್ರಕ್ರಿಯೆ ಅಥವಾ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಜನರಲ್ ಸೆಕ್ರೆಟರಿ ಜಿ.ಎನ್.ಲೋನ್ ಹಂಜುರಾ ಪೂರ್ವ ನಿಯೋಜಿತದಂತೆ ಎಲ್ಲಾ ನಡೆಯಲಿದೆ, ನಾವು ಸಭೆಯಲ್ಲಿ ಪಾಲ್ಗೊಳ್ಳುವುದು ಪ್ರಯೋಜನವಿಲ್ಲ ಎಂದಿದ್ದಾರೆ.
ಈ ಕುರಿತು ಡಿಲಿಮಿಟೇಷನ್ ಆಯೋಗದ ಅಧ್ಯಕ್ಷೆ ರಂಜನಾ ಪ್ರಕಾಶ್ ದೇಸಾಯಿ ಅವರಿಗೆ ಪತ್ರ ಬರೆದಿರುವ ಜಿ.ಎನ್.ಲೋನ್, ಹಂಜುರಾ ಡಿಲಿಮಿಟೇಷನ್ ಆಯೋಗದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಖಂಡಿತವಾಗಿಯೂ ಇಲ್ಲಿನ ಜನರ ಹಿತಾಸಕ್ತಿಗೆ ವಿರುದ್ಧವಾಗಿರುತ್ತವೆ. ಆಯೋಗದ ನಿರ್ಧಾರಗಳು ಪೂರ್ವ ನಿಯೋಜಿತವಾಗಿರುತ್ತವೆ. ಈ ಕಾರಣದಿಂದಾಗಿ ನಾವು ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಥಯಾತ್ರೆಗೆ ಅವಕಾಶ ಕೇಳಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದು 'ಅಸಾಂವಿಧಾನಿಕ' ಎಂದು ಮತ್ತೊಮ್ಮೆ ಪತ್ರದಲ್ಲಿ ಉಲ್ಲೇಖಿಸಿದ್ದು, ಇದೇ ಅಸಾಂವಿಧಾನಿಕ ಪ್ರಕ್ರಿಯೆ ಡಿಲಿಮಿಟೇಷನ್ ಪ್ರಕ್ರಿಯೆಯಲ್ಲೂ ನಡೆಯುತ್ತದೆ ಎಂದು ಉಲ್ಲೇಖಿಸಿದ್ದಾರೆ.