ಕಾಶ್ಮೀರ: ಸುಮಾರು 14 ತಿಂಗಳ ಬಂಧನದ ಅವಧಿ ಬಳಿಕ ಕಳೆದ ತಿಂಗಳಷ್ಟೇ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ(ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಿದ್ದು, ಅವರು ಶುಕ್ರವಾರ ಪಕ್ಷದ ಕಚೇರಿಯನ್ನು ತಲುಪಿ ಪಕ್ಷದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಮುಫ್ತಿ ಬಿಗಿ ಪೊಲೀಸ್ ಬಂದೋಬಸ್ತ್ಗಳೊಂದಿಗೆ ಪಕ್ಷದ ಕಚೇರಿ ತಲುಪಿದರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರ ಚೀನಾ ವಿಷಯದಲ್ಲಿ ಮೌನವಾಗಿದೆ. ಚೀನಾವನ್ನು ಗಡಿಯಲ್ಲಿ ತಡೆಯುವ ಬದಲು ಜಮ್ಮು ಮತ್ತು ಕಾಶ್ಮೀರದ ಜನರನ್ನು ಬಂಧಿಸುವ ಮೂಲಕ ಸರ್ಕಾರ ಅಧಿಕಾರ ಚಲಾಯಿಸುತ್ತಿದೆ ಎಂದು ಅವರು ದೂರಿದರು.
370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಅವರನ್ನು ಲೂಟಿ ಮಾಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.
"370 ನೇ ವಿಧಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ರಕ್ಷಣೆಗಾಗಿತ್ತು. ಅದನ್ನು ತೆಗೆದುಹಾಕುವ ಮೂಲಕ ಅವರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಆದರೆ, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ" ಎಂದು ಮುಫ್ತಿ ಹೇಳಿದರು.