ನವದೆಹಲಿ: ಇಂಡಿಯನ್ ಮುಜಾಹಿದ್ದೀನ್‌ನ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಹಾಗೂ ಇತರ 10 ಜನರ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ದೋಷರೋಪ ದಾಖಲು ಮಾಡುವಂತೆ ಆದೇಶ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, 2012ರಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಯಾಸಿನ್ ಭಟ್ಕಳ್ ಮತ್ತು ಮೊಹಮ್ಮದ್ ದಾನಿಶ್ ಅನ್ಸಾರಿ ಸೇರಿದಂತೆ ಒಟ್ಟು 11 ಜನರ ಆರೋಪಿಗಳ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸುವಂತೆ ಸೂಚಿಸಿದ್ದಾರೆ. ಭಟ್ಕಳ್ ಮತ್ತು ದಾನಿಶ್ ಭಯೋತ್ಪಧಕ ಯೋಜನೆ ರೂಪಿಸಲು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
ಯಾಸಿನ್ ಭಟ್ಕಳ್ ಮತ್ತು ಇತರ ಆರೋಪಿಗಳಾದ ಮೊಹಮ್ಮದ್ ಅಫ್ತಾಬ್ ಆಲಂ, ಮೊಹಮ್ಮದ್ ದಾನಿಶ್ ಅನ್ಸಾರಿ, ಇಮ್ರಾನ್ ಖಾನ್, ಸೈಯದ್ ಮಕ್ಬೂಲ್, ಮೊಹಮ್ಮದ್ ಅಹ್ಮದ್ ಸಿದ್ದಿಬಪ್ಪ, ಅಸಾದುಲ್ಲಾ ಅಖ್ತರ್, ಉಜೈರ್ ಅಹ್ಮದ್, ಹೈದರ್ ಅಲಿ, ಮೊಹಮ್ಮದ್ ರೆಹ್ ಝಿಯಾ, ಒಬೈದ್ ಉರ್ ರೆಹಮಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 1860 (10 ಕ್ಕೂ ಹೆಚ್ಚು ವ್ಯಕ್ತಿಗಳು ಮಾಡಿದ ಅಪರಾಧಗಳಿಗೆ ಸಂಬಂಧಿಸಿದ)ರ ಅನ್ವಯ ವಿವಿಧ ಆರೋಪಗಳನ್ನು ಹೊರಿಸಲಾಗಿದೆ.
ದೇಶದ್ರೋಹದ ಆರೋಪದ ಮೇಲೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಇಂಡಿಯನ್ ಮುಜಾಹಿದ್ದೀನ್‌ನ ಸದಸ್ಯರಾಗಿದ್ದಾರೆ ಮತ್ತು ಭಾರತದ ವಿರುದ್ಧ ಯುದ್ಧ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಸಾಕ್ಷ್ಯಾಧಾರಗಳ ಪ್ರಕಾರ, ಯಾಸಿನ್ ಭಟ್ಕಳ್ನ ಮೊಬೈಲ್ ಚಾಟಿಂಗ್ನಲ್ಲಿ, ಸೂರತ್‌ನಲ್ಲಿ ಪರಮಾಣು ಬಾಂಬ್ ಇಡುವ ಯೋಜನೆ ಬಗ್ಗೆ ಬಹಿರಂಗಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಮರಣದಂಡನೆಗೆ 'ಕಡಿಮೆ ನೋವಿನ, ಹೆಚ್ಚು ಘನತೆಯ' ವಿಧಾನ ಪರಿಗಣಿಸಲು ಸೂಚಿಸಿದ ಸುಪ್ರೀಂ ಕೋರ್ಟ್
ಈ ಮೊಬೈಲ್ ಚಾಟಿಂಗ್ ಸಂಭಾಷಣೆಯಲ್ಲಿ ಜಿಹಾದ್ ಹೆಸರಿನಲ್ಲಿ ಮುಸ್ಲಿಮೇತರರ ಹತ್ಯೆ ಸಮರ್ಥಿಸುವ ಲೇಖನಗಳು ಮತ್ತು ವೀಡಿಯೊಗಳು ಪತ್ತೆಯಾಗಿವೆ. ಸೂರತ್‌ನಲ್ಲಿ ಮುಸ್ಲಿಮರನ್ನು ಸ್ಥಳಾಂತರ ಮಾಡಿ ನಂತರ, ಬಾಂಬ್ ಸ್ಫೋಟಿಸುವ ಮೂಲಕ ಈ 11ಜನ ಭಾರತದ ವಿರುದ್ಧ ಯುದ್ಧ ಪ್ರಾರಂಭಿಸಲು ಬಯಸಿದ್ದರು. ಯಾಸಿನ್ ಭಟ್ಕಳ್ ಇದರ ಸಂಚು ರೂಪಿಸಿದ್ದಲ್ಲದೇ, ಸ್ಫೋಟಕ್ಕೆ ಐಇಡಿ ಸಿದ್ಧಪಡಿಸಲು ಸಹಾಯ ಮಾಡಿದ್ದಾನೆ. ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 21 ಫೆಬ್ರವರಿ 2013 ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಎರಡು ಸ್ಫೋಟಗಳು ಸಂಭವಿಸಿದವು. ಇದರಲ್ಲಿ 18 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್, ಪಾಕಿಸ್ತಾನಿ ಪ್ರಜೆ ಜಿಯಾ ಉರ್ ರೆಹಮಾನ್ ಮತ್ತು ಇತರ ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಯಾಸಿನ್ ಭಟ್ಕಳ್ ಎನ್ಐಎಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿದ್ದ. 2013ರಲ್ಲಿ ಯಾಸಿನ್‌ನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗೆ ಪೆರೋಲ್ ನೀಡದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ