ಸಿಲಾಪಥಾರ್: ಹಿಂದಿನ ಸರ್ಕಾರ ಅಸ್ಸೋಂ ಮತ್ತು ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆಯ ಮನಸ್ಥಿತಿ ಹೊಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಮೂರನೇ ಬಾರಿ ಅಸ್ಸೋಂಗೆ ಭೇಟಿ ನೀಡಿರುವ ಅವರು ಧೆಮಾಜಿ ಜಿಲ್ಲೆಯ ಸಿಲಾಪಥಾರ್ನಲ್ಲಿ ಭಾಷಣ ಮಾಡಿದ್ದು, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದರು.
ಅಸ್ಸೋಂ ಹಾಗೂ ಈಶಾನ್ಯ ರಾಜ್ಯಗಳ ಬೆಳವಣಿಗೆಯನ್ನು ಹಿಂದಿನ ಸರ್ಕಾರಗಳು ತಡೆದಿವೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು ಐದು ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದನ್ನೂ ಓದಿ: ಕರ್ನಾಟಕ, ಮಧ್ಯಪ್ರದೇಶ ಆಯ್ತು, ಇದೀಗ 'ಕೈ' ತಪ್ಪಿದ ಪುದುಚೇರಿ!
ಧೆಮಾಜಿ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ, ಸೌಲ್ಕುಚಿ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ, ಇಂಡಿಯನ್ ಆಯಿಲ್ನ ಬೊಂಗೈಗಾಂವ್ ರಿಫೈನರಿಯಲ್ಲಿ ಐಎನ್ಡಿಎಂಎಎಕ್ಸ್ ವಿಭಾಗ ಲೋಕಾರ್ಪಣೆ, ದಿಬ್ರೂಗಢ ಬಳಿಯ ಮಧುಬನಿ ಬಳಿ ಆಯಿಲ್ ಇಂಡಿಯಾ ಲಿಮಿಟೆಡ್ನ ಸೆಕೆಂಡರಿ ಟ್ಯಾಂಕ್ ಫಾರ್ಮ್ ಉದ್ಘಾಟನೆ, ಮಕುಮ್ನಲ್ಲಿ ಗ್ಯಾಸ್ ಕಂಪ್ರೆಷನ್ ಸ್ಟೇಷನ್ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು.
ಹಿಂದಿನ ಭೇಟಿ ವೇಳೆ, ಈಶಾನ್ಯ ಭಾರತದ ರಾಜ್ಯಗಳು ಭಾರತದ ಅಭಿವೃದ್ಧಿಯ ಹೊಸ ಇಂಜಿನ್ಗಳಾಗಿವೆ. ಈಗ ಉದ್ಘಾಟನೆಯಾಗಿರುವ ಪ್ರಮುಖ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ, ನಾನು ಹೇಳುವುದು ವಾಸ್ತವವಾಗಲಿದೆ ಎಂದಿದ್ದಾರೆ.
ಬಿಜೆಪಿ ಯೋಜನೆಗಳನ್ನು ಬಣ್ಣಿಸಿದ ಪ್ರಧಾನಿ 2014ಕ್ಕೂ ಮೊದಲು ದೇಶದ ಅರ್ಧದಷ್ಟು ಜನರಿಗೆ ಮಾತ್ರ ಎಲ್ಪಿಜಿ ಸಂಪರ್ಕವಿತ್ತು. ಅಸ್ಸೋಂನಲ್ಲಿ ಶೇಕಡಾ 40ರಷ್ಟು ಕುಟುಂಬಗಳು ಎಲ್ಪಿಜಿ ಬಳಕೆ ಮಾಡುತ್ತಿದ್ದವು. ಈಗ ಶೇಕಡಾ ನೂರರಷ್ಟು ಕುಟುಂಬಗಳು ಎಲ್ಪಿಜಿ ಬಳಸುತ್ತಿವೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನೂತನ ಶಿಕ್ಷಣ ನೀತಿಯಿಂದ ಅಸ್ಸೋಂ ರಾಜ್ಯದ ಜನತೆಗೆ ಅನುಕೂಲವಾಗಲಿದೆ ಎಂದು ಈ ವೇಳೆ ಮೋದಿ ಅಭಿಪ್ರಾಯಪಟ್ಟಿದ್ದಾರೆ.