ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್ನಲ್ಲಿ ಸಿಂಹಿಣಿಯೊಂದು ಐದು ಮರಿಗಳು ಜನ್ಮ ನೀಡಿದೆ. ಈ ಪೈಕಿ ನಾಲ್ಕು ಮರಿಗಳು ಮೃತಪಟ್ಟಿವೆ. ಆದರೆ, ಇದೇ ಮೊದಲ ಬಾರಿ ಈ ಸಿಂಹಿಣಿ ಸುಮಾರು ಗಂಟೆಗಳ ಅಂತರದಲ್ಲಿ ಐದು ಮರಿಗಳಿಗೆ ಜನ್ಮ ನೀಡಿರುವುದು ವನ್ಯಜೀವಿ ಮತ್ತು ಅರಣ್ಯ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಆದ್ದರಿಂದ ಈ ಸಿಂಹಿಣಿ ಬಗ್ಗೆ ಅಧ್ಯಯನ ಮಾಡಲು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಮಿತಿಯನ್ನು ರಚಿಸಿದೆ.
ಇಟಾವಾ ಲಯನ್ ಸಫಾರಿ ಪಾರ್ಕ್‌ನ 'ಸೋನಾ' ಎಂಬ ಸಿಂಹಿಣಿ ಜುಲೈ 6ರಿಂದ ಜು.10ರ ನಡುವೆ ಐದು ಮರಿಗಳಿಗೆ ಜನ್ಮ ನೀಡಿದೆ. ಜು.6ರಂದು ಮೊದಲಿಗೆ ಒಂದು ಮರಿಗೆ ಜನ್ಮ ನೀಡಿತ್ತು. ಇದಾದ 75 ಗಂಟೆಗಳ ನಂತರ ಸಿಂಹಿಣಿ ಮತ್ತೆ ಮೂರು ಮರಿಗಳಿಗೆ ಜನ್ಮ ಕೊಟ್ಟಿದೆ. ಅಲ್ಲದೇ, ಸುಮಾರು 24 ಗಂಟೆಗಳ ನಂತರ ಮತ್ತೊಂದು ಮರಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಸಿಂಹಿಣಿಗಳು 24 ರಿಂದ 30 ಗಂಟೆಗಳ ಒಳಗೆ ಎಲ್ಲ ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ, ಈ ಹಲವು ಗಂಟೆಗಳ ಬಳಿಕ ಮರಿಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಯನ ಸಮಿತಿ ರಚನೆ: ಐದು ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ 'ಸೋನಾ' ಕುರಿತು ಅಧ್ಯಯನ ಮಾಡಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಧೀರ್ ಕುಮಾರ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ ಅಭಿವೃದ್ಧಿ) ನೀರಜ್ ಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪಶ್ಚಿಮ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶೇಷ್ ನಾರಾಯಣ ಮಿಶ್ರಾ, ಇಟಾವಾ ಲಯನ್ ಸಫಾರಿ ಪಾರ್ಕ್‌ನ ನಿರ್ದೇಶಕಿ ದೀಕ್ಷಾ ಭಂಡಾರಿ ಮತ್ತು ಗೋರಖ್‌ಪುರ ಮೃಗಾಲಯದ ಪಶುವೈದ್ಯ ಡಾ. ಯೋಗೇಶ್ ಪ್ರತಾಪ್ ಸಿಂಗ್ ಈ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಸಿಂಹಿಣಿ 'ಸೋನಾ' ಹೆರಿಗೆ ಸಮಯದಲ್ಲಿ ಲಭ್ಯವಿರುವ ವಿಡಿಯೋಗಳು, ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳನ್ನು ಅಧ್ಯಯನ ಮಾಡಿದ ನಂತರ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಜೊತೆಗೆ ಪ್ರಮುಖವಾಗಿ ಗುಜರಾತ್ ಮತ್ತು ಡೆಹ್ರಾಡೂನ್ ಭಾರತೀಯ ವನ್ಯಜೀವಿ ಸಂಸ್ಥೆಯ ಇತರ ತಜ್ಞರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ಪಡೆಯುವ ಮೂಲಕ ವರದಿಯನ್ನು ತಯಾರಿಸಲಿದೆ. ಜುಲೈ ಅಂತ್ಯದೊಳಗೆ ವರದಿ ಸಲ್ಲಿಸಲು ಸಮಿತಿಗೆ ಕಾಲಾವಕಾಶ ನೀಡಲಾಗಿದೆ.
ಗುಜರಾತ್‌ನಿಂದ ಸಿಂಹಗಳು ಇಲ್ಲಿಗೆ ಬಂದಿರುವುದರಿಂದ ಗುಜರಾತ್‌ನ ತಜ್ಞರನ್ನೂ ಸಂಪರ್ಕಿಸಲಾಗಿದೆ. ಗುಜರಾತ್ ಅರಣ್ಯ ಇಲಾಖೆಯು ಸೋನಾ ಹೆರಿಗೆಯಲ್ಲಿನ ಅಂತರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ. ಇದಕ್ಕಾಗಿ ತಜ್ಞರನ್ನು ಒದಗಿಸುವಂತೆ ಗುಜರತ್ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಧೀರ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ನಾಲ್ಕು ಸಿಂಹಿಣಿ ಮರಿಗಳು ಸಾವು: ಜುಲೈ 6ರಂದು ಏಷ್ಯಾಟಿಕ್ ಸಿಂಹಿಣಿ 'ಸೋನಾ' ಇಟಾವಾ ಲಯನ್ ಸಫಾರಿ ಪಾರ್ಕ್‌ನ ಬ್ರೀಡಿಂಗ್ ಸೆಂಟರ್‌ನಲ್ಲಿ ಮರಿಗೆ ಜನ್ಮ ನೀಡಿತ್ತು. ಬಳಿಕ ಈ ಸಿಂಹಿಣಿ 36 ಗಂಟೆಗಳ ಅಂತರದ ನಂತರ ಮತ್ತೆ ಮೂರು ಮರಿಗಳಿಗೆ ಜನ್ಮ ಕೊಟ್ಟಿದೆ. ಇದಾದ ಮರುದಿನ ಸಹ ಮತ್ತೊಂದು ಒಂದು ಮರಿಗೆ ಜನ್ಮ ಕೊಟ್ಟಿದೆ. ಅದಲ್ಲದೇ, ಸುಮಾರು 24 ಗಂಟೆಗಳ ನಂತರ ಇನ್ನೊಂದು ಮರಿಗೆ ಜನ್ಮ ನೀಡಿದೆ. ಆದರೆ, ಜುಲೈ 11ರಂದು ಮೂರು ಮರಿಗಳು ಸಾವನ್ನಪ್ಪಿವೆ. ಜುಲೈ 13ರಂದು ನಾಲ್ಕನೇ ಮರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಂಹಿಣಿ 'ಸೋನಾ' ಮೊದಲಿಗೆ ಜನ್ಮ ನೀಡಿದ ಮರಿ ಮಾತ್ರ ಜೀವಂತವಾಗಿದೆ. ಆದರೆ, ಸಿಂಹಿಣಿ ಆಹಾರ ನೀಡದ ಕಾರಣ ಉಳಿದಿರುವ ಏಕೈಕ ಮರಿಯನ್ನು ಸಫಾರಿಯ ನವಜಾತ ಶಿಶು ಕೇಂದ್ರದಲ್ಲಿ ಇರಿಸಲಾಗಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ, ಈ ಮರಿಗೆ ಬಾಟಲಿಯಿಂದ ಹಾಲು ನೀಡಲಾಗುತ್ತಿದೆ. ಆರಂಭದಲ್ಲಿ ಈ ಮರಿ ಕಡಿಮೆ ತೂಕ ಹೊಂದಿತ್ತು. ಮರಿಯ ತೂಕ ಸುಮಾರು 1 ಕೆಜಿ ಇರಬೇಕಿತ್ತು. ಆದರೆ, ಅದು ಕೇವಲ 800 ಗ್ರಾಂ ಇತ್ತು. ಈಗ ಈ ಮರಿಯ ಆರೋಗ್ಯ ಸುಧಾರಿಸುತ್ತಿದೆ. ಒಂದು ವಾರದಲ್ಲಿ ಇದು 400 ಗ್ರಾಂ ತೂಕ ಹೆಚ್ಚಾಗಿದ್ದು, ಮರಿ ತೂಕ ಈಗ 1,200 ಗ್ರಾಂ ಆಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: ಸಿಂಹಿಣಿ ಬಾಯಿಯಿಂದ ಗೋಮಾತೆ ರಕ್ಷಿಸಿದ ಅನ್ನದಾತ! ರೈತನ ಡೇರಿಂಗ್ ವಿಡಿಯೋ ವೈರಲ್..