ಪಾಟ್ನಾ: ರಾಜಧಾನಿಯ ಪತ್ರಕಾರ್ ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬಿಜೆಪಿಯ ಮಾಜಿ ಶಾಸಕರ ಇಬ್ಬರು ಸಹೋದರರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರಾದ ಶಂಭು ಶರಣ್ ಮತ್ತು ಗೌತಮ್ ಸಿಂಗ್ ಅವರನ್ನು ಮಂಗಳವಾರ ಸಂಜೆ ಕಾಳಿ ಮಂದಿರ ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಡಬಲ್ ಮರ್ಡರ್‌ನಲ್ಲಿ ನೀಮಾ ನಿವಾಸಿ ಪಾಂಡವ್ ಗ್ಯಾಂಗ್‌ನ ಕಿಂಗ್‌ಪಿನ್ ಸಂಜಯ್ ಸಿಂಗ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಬಂದಿದ್ದ ಬೈಕ್ನಲ್ಲಿ ಪ್ರೆಸ್ ಎಂದು ಬರೆಯಲಾಗಿತ್ತು ಎನ್ನಲಾಗಿದೆ.
ನಡುರಸ್ತೆಯಲ್ಲಿ ಗುಂಡುಗಳ ಸುರಿಮಳೆ: ಪತ್ರಕಾರ್ ನಗರ ಪೊಲೀಸ್ ಠಾಣೆ ಬಳಿ ಬಿಜೆಪಿ ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಸಹೋದರರಿಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಈ ವೇಳೆ, ಪಾತಕಿಗಳ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಿತ್ತರಂಜನ್ ಸಹೋದರರು ನಡುರಸ್ತೆಯಲ್ಲೇ ಬಿದ್ದು ನರಳಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪತ್ರಕಾರ್ ನಗರ ಠಾಣೆ ಪ್ರಭಾರಿ ಯುವಕರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲಿ ವೈದ್ಯರು ಗೌತಮ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ತಡರಾತ್ರಿ ಚಿಕಿತ್ಸೆ ಫಲಿಸದೇ ಶಂಭು ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.
ಓದಿ: ಸಿಧು ಮೂಸ್ ವಾಲಾರಿಂದ ಟುಪಕ್ ಶಕುರ್ ವರೆಗೆ: ಹತ್ಯೆಗೀಡಾದ ಐವರು ಖ್ಯಾತ ರ್ಯಾಪರ್ಗಳಿವರು
7 ಎಂಎಂ ಮತ್ತು 9 ಎಂಎಂ ಪಿಸ್ತೂಲ್ನಿಂದ ದಾಳಿ: ಸ್ಥಳಕ್ಕಾಗಮಿಸಿದ ಪಾಟ್ನಾ ಎಸ್‌ಎಸ್‌ಪಿ ಮಾನವ್ ಜೀತ್ ಸಿಂಗ್ ಧಿಲ್ಲೋನ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ನೀಮಾ ಗ್ರಾಮದಲ್ಲಿ ವಾಸಿಸುತ್ತಿದ್ದ ಇಬ್ಬರು ಒಡಹುಟ್ಟಿದವರ ಮೇಲೆ ದುಷ್ಕರ್ಮಿಗಳು ದೀರ್ಘಕಾಲ ಬೆನ್ನಟ್ಟಿದ ನಂತರ ಗುಂಡು ಹಾರಿಸಿದ್ದಾರೆ.
ಅದೇ ಗ್ರಾಮದ ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯ ನಡೆಯುತ್ತಿದೆ. ಅಪರಾಧಿಗಳು 7 ಎಂಎಂ ಮತ್ತು 9 ಎಂಎಂ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಸ್ಥಳದಿಂದ ನಾಲ್ಕು ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪ್ರಾಥಮಿಕ ತನಿಖೆ ವೇಳೆ ಪಾಂಡವ ಗ್ಯಾಂಗ್ ಹೆಸರು ಬಯಲಿಗೆ ಬರುತ್ತಿದೆ ಎಂದು ಹೇಳಿದರು.
ಘಟನೆಗೆ ಕಾರಣ ಗ್ಯಾಂಗ್ ವಾರ್ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಗುರುತಿಸಲು ಸ್ಥಳದ ಸುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.