ಪಲಮು(ಜಾರ್ಖಂಡ್): ರಾಜ್ಯದ ಪಲಾಮು ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಇಬ್ಬರು ವಾಹನ ಚಾಲಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಮೇದಿನಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ವೈದ್ಯಕೀಯ ಚಿಕಿತ್ಸೆಗಾಗಿ ಮೇದಿನಿನಗರಕ್ಕೆ ಬುಧವಾರ ಬಂದಿದ್ದರು. ಆಕೆ ತನ್ನ ಮೊಬೈಲ್ ರೀಚಾರ್ಜ್ ಮಾಡಿಸಲು ಅಂಗಡಿಯನ್ನು ಹುಡುಕುತ್ತಿದ್ದರು. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಬಳಿ ಬಂದು ಸಹಾಯ ಮಾಡುವ ನೆಪದಲ್ಲಿ ಮೊಬೈಲ್ ನಂಬರ್ ಪಡೆದಿದ್ದಾನೆ. ಅಲ್ಲದೇ, ತಕ್ಷಣವೇ ರೀಚಾರ್ಜ್ ಕೂಡಾ ಮಾಡಿದ್ದಾನೆ.
ಆದರೆ, ಇದಾದ ಸ್ವಲ್ಪ ಹೊತ್ತಿನ ಬಳಿಕ ಮಹಿಳೆಗೆ ಕರೆ ಮಾಡಿ, ತನ್ನನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಮಹಿಳೆ ಆತ ಹೇಳಿದ ಸ್ಥಳಕ್ಕೆ ಬಂದಿದ್ದರು. ಆರೋಪಿ ಸೇರಿಕೊಂಡು ಆಕೆಯನ್ನು ಬಲವಂತವಾಗಿ ಹೌಸಿಂಗ್ ಕಾಲೊನಿ ಪ್ರದೇಶಕ್ಕೆ ಕರೆದೊಯ್ದು, ದುಷ್ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ಮೇದಿನಿನಗರ ಟೌನ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು, ಕೃತ್ಯ ನಡೆದ ಪ್ರದೇಶದಿಂದ ಇಬ್ಬರನ್ನು ಬಂಧಿಸಿದರು. ಆರೋಪಿಗಳು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯ ವಾಹನ ಚಾಲಕರಾಗಿದ್ದಾರೆ ಎಂದು ಅಧಿಕಾರಿ ವಿವರಿಸಿದರು.
ಘಟನೆಯನ್ನು ಪಲಾಮು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಮಾ ರಮೇಶನ್ ಖಚಿತಪಡಿಸಿದ್ದು, ''ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರು ಚಾಲಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದರು.
ಇದನ್ನೂ ಓದಿ: ಮುಂಬೈನಲ್ಲಿ 64 ವರ್ಷದ ವಿಧವೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ