ನವದೆಹಲಿ: ಭಾರತದ ನೆರೆಯರಾಷ್ಟ್ರ ಪಾಕಿಸ್ತಾನ ದೇಶವು ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಶ್ರೀಲಂಕಾದಂತೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದು ಬಹುತೇಕ ದಿವಾಳಿತನದ ಅಂಚಿನಲ್ಲಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಭಯೋತ್ಪಾದನೆ ಸಮಸ್ಯೆ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದೆ.
ಇಮ್ರಾನ್ ಖಾನ್ ಮತ್ತು ಶೆಹಬಾಜ್ ಷರೀಫ್ ಅವರು ಪರಸ್ಪರ ಆರೋಪ - ಪ್ರತ್ಯಾರೋಪ ಮಾಡುತ್ತಿದ್ದು, ರಾಜಕೀಯ ಕ್ರಾಂತಿಗೆ ಸನ್ನಿಹತವಾಗಿದೆ. ಮತ್ತೊಂದೆಡೆ ಇತ್ತೀಚಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಸುಮಾರು ಎರಡು ದಶಕಗಳ ಹಿಂದಕ್ಕೆ ತಳ್ಳಿದೆ. ಇಂಥ ಸವಾಲುಗಳನ್ನು ಎದುರಿಸಲು ಸದ್ಯ ಪಾಕಿಸ್ತಾನದಲ್ಲಿ ಭರವಸೆಯ ಆಶಾಕಿರಣ ಇರುವುದು ವಿದೇಶಗಳ ನೆರವು ಮಾತ್ರ.
ಡಾಲರ್ ಎದುರು ಕುಸಿದ ಪಾಕಿಸ್ತಾನಿ ರೂಪಾಯಿ: ಪಾಕಿಸ್ತಾನದ ಆರ್ಥಿಕ ದುಃಸ್ಥಿತಿ ಇನ್ನು ಯಾರಿಂದಲೂ ನಿವಾರಣೆಯಾಗಿಲ್ಲ. ಜನವರಿ 2022 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ ವಿದೇಶಿ ವಿನಿಮಯ ಸಂಗ್ರಹವು $16.6 ಬಿಲಿಯನ್ ಇದ್ದಿತ್ತು. ಈಗ ಅದು 5.576 ಶತಕೋಟಿ ಡಾಲರ್‌ಗೆ ಕುಸಿದಿದೆ. ವಿಶ್ಲೇಷಕರ ಮಾಹಿತಿ ಪ್ರಕಾರ, ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹದ ಅನ್ವಯ ಪಾಕಿಸ್ತಾನವು ಮೂರು ವಾರಗಳವರೆಗೆ ಮಾತ್ರ ಆಮದು ಮಾಡಿಕೊಳ್ಳಬಹುದು.
ಇದಷ್ಟೇ ಅಲ್ಲದೇ ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ ಕೂಡ ದುರ್ಬಲವಾಗಿ ಮಂಡಿಯೂರಿದೆ. ಡಾಲರ್ ಬೆಲೆ 227.8 ಪಾಕಿಸ್ತಾನಿ ರೂಪಾಯಿಗೆ ಸಮನಾಗಿದೆ. ಕಳೆದ ಮೂರು ತಿಂಗಳಲ್ಲಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ 10 ರೂಪಾಯಿ ಇಳಿಕೆಯಾಗಿದೆ. ಆಹಾರ ಹಣದುಬ್ಬರವು ಸಹ ವರ್ಷದಿಂದ ವರ್ಷಕ್ಕೆ 35.5 ಪ್ರತಿಶತದಷ್ಟು ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಸಾರಿಗೆ ದರಗಳು ಡಿಸೆಂಬರ್‌ನಲ್ಲಿ 41.2 ಪ್ರತಿಶತದಷ್ಟು ಹೆಚ್ಚಾಗಿವೆ.
ಕುಸಿದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ:ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ರ‍್ಯಾಂಕಿಗ್ ಪಟ್ಟಿ ಪ್ರಕಾರ , ಪಾಕಿಸ್ತಾನವು ವಿಶ್ವದ ನಾಲ್ಕನೆಯ ಕೆಟ್ಟ ಪಾಸ್‌ಪೋರ್ಟ್ ಆಗಿ ಹೊರಹೊಮ್ಮಿದೆ. 2022 ರ ಶ್ರೇಯಾಂಕದಲ್ಲಿ ಪಾಕಿಸ್ತಾನದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದಿನ ವರ್ಷವೂ ಇದು ವಿಶ್ವದ ನಾಲ್ಕನೇ ಕೆಟ್ಟ ಪಾಸ್‌ಪೋರ್ಟ್ ಎಂದು ಗುರುತಿಸಲಾಗಿದೆ. ಈ ವರ್ಷವೂ ಪಾಕಿಸ್ತಾನದ ಶ್ರೇಯಾಂಕವೂ 106 ಸ್ಥಾನಕ್ಕೆ ಕುಸಿದಿದೆ. ಹೊಸ ಶ್ರೇಯಾಂಕದಲ್ಲಿ ಪಾಕಿಸ್ತಾನದ ಕೆಳಗೆ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನ ಇವೆ. ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಫ್ರೀ ಅಥವಾ ವೀಸಾ ಆನ್ ಅರೈವಲ್ ಮೂಲಕ 32 ದೇಶಗಳಿಗೆ ಪ್ರಯಾಣಿಸಬಹುದು.
ಪಾಕಿಸ್ಥಾನಕ್ಕೆ ಬೆಂಬಿಡದೆ ಕಾಡಿದ ಹಸಿವಿನ ಭೀತಿ:ವಿಶ್ವ ಆರ್ಥಿಕ ವೇದಿಕೆ ವರದಿ ಬಿಡುಗಡೆ ಪ್ರಕಾರ ಪಾಕಿಸ್ತಾನವು ಹಸಿವಿನ ದೊಡ್ಡ ಅಪಾಯವನ್ನು ಎದುರಿಸುತ್ತಿದೆ. ನೈಸರ್ಗಿಕ ವಿಕೋಪಗಳು ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇನ್ನಷ್ಟು ಈ ಅಪಾಯವು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಜಿಯೋ ನ್ಯೂಸ್ ವರದಿಯ ಪ್ರಕಾರ, ಹವಾಮಾನ ಸಂಬಂಧಿತ ನೈಸರ್ಗಿಕ ವಿಕೋಪ ಮತ್ತು ಪಾಕಿಸ್ತಾನದ ಅಸ್ತವ್ಯಸ್ತಗೊಂಡ ಪೂರೈಕೆ ಸಂಯೋಜನೆಯಿಂದಾಗಿ ಇಂಥ ಸನ್ನಿವೇಶದಲ್ಲಿ ಪ್ರಸ್ತುತ ಲಕ್ಷಾಂತರ ಜನರ ಹಸಿವಿನ ಬಿಕ್ಕಟ್ಟು ವಿನಾಶಕಾರಿ ಘಟ್ಟಕ್ಕೆ ತಲುಪಬಹುದು. ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ಇನ್ನೊಂದು ಕಡೆ ಏರುತ್ತಿರುವ ಹಣದುಬ್ಬರವು ಮತ್ತಷ್ಟು ಜನರ ಹಸಿವಿನ ಅಪಾಯವನ್ನು ಹೆಚ್ಚಿಸಲಿದೆ ಎಂದು ಹೇಳಿದೆ.
2022ರ ರಾಜಕೀಯ ಅಸ್ಥಿರತೆ: ಆಗಿನ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಎದುರಿಸಬೇಕಾಯಿತು. ವಿಶ್ವಾಸ ಮತದ ಮೊದಲು, ಇಮ್ರಾನ್ ಖಾನ್ ಅವರು, ವಿರೋಧ ಪಕ್ಷಗಳು ಅಮೆರಿಕ ಮತ್ತು ಪಾಕಿಸ್ತಾನದ ಸೇನೆಯ ಪ್ರಚೋದನೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದರು. ಅಂದಿನಿಂದ, ಇಮ್ರಾನ್ ಖಾನ್ ಅವರು, ನಿರಂತರವಾಗಿ ಚುನಾವಣೆಗೆ ಒತ್ತಾಯಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ ನಿರಂತರ ಪ್ರಚಾರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಅನೇಕ ರ‍್ಯಾಲಿಗಳು ಸಹ ನಡೆದವು. ಮತ್ತೊಂದೆಡೆ, ಶೆಹಬಾಜ್ ಷರೀಫ್ ಪಾಕಿಸ್ತಾನದಲ್ಲಿ ಹಣದುಬ್ಬರವನ್ನು ತೊಡೆದುಹಾಕಲು ವಿಫಲರಾಗಿದ್ದಾರೆ. ಆದಷ್ಟು ಬೇಗ ಚುನಾವಣೆ ನಡೆಸುವಂತೆ ಅವರ ಮೇಲೆ ಒತ್ತಡವೂ ಹೆಚ್ಚುತ್ತಿದೆ.
ಪಿಎಲ್ಎಮ್-ಎನ್ ಹಾಗೂ ಪಿಪಿಪಿ ಒಪ್ಪಂದ: ಇಮ್ರಾನ್ ಖಾನ್ ಅವರ ಸರ್ಕಾರವನ್ನು ಉರುಳಿಸಲು ಶಹಬಾಜ್ ಷರೀಫ್ ಅವರ ಪಕ್ಷ PLM-N ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಕ್ಷ PPP ನಡುವೆ ಒಪ್ಪಂದಕ್ಕೆ ಬರಲಾಗಿತ್ತು. ಈ ಒಪ್ಪಂದ ಮುಂದಿನ ಚುನಾವಣೆಯ ವರೆಗೂ ಇರುತ್ತದೆಯೇ? ಈ ಪ್ರಶ್ನೆಗೆ ಉತ್ತರ ಭವಿಷ್ಯದಲ್ಲಿ ಮಾತ್ರ ತಿಳಿಯುತ್ತದೆ. ಪಾಕಿಸ್ತಾನದ ಸಂಪೂರ್ಣ ರಾಜಕೀಯವು ಸೇನೆಯ ಉದ್ದೇಶಗಳ ಮೇಲೆ ಅವಲಂಬಿತವಾಗಿದೆ. ರಾಜಕೀಯದ ಈ ಒಂಟೆಗಳು ಯಾವ ಕಡೆಗೆ ಹೋಗುತ್ತವೆ ಎಂಬುವುದು ಇನ್ನೂ ಕುತೂಹಲಕಾರಿಯಾಗಿದೆ.
ಪಾಕಿಸ್ತಾನ ಮೇಲೆ ಭಯೋತ್ಪಾದನೆ ಕರಿನೆರಳು:ಪಾಕಿಸ್ತಾನದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿದೆ. ಅವರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಈ ಎಲ್ಲ ಕೆಲಸಗಳಿಗೆ ಸಹಾಯ ಮಾಡುತ್ತಿದೆ. ಪಾಕಿಸ್ತಾನಕ್ಕೆ ಈಗ ಭಯೋತ್ಪಾದನೆ ಎದುರಿಸುವುದು ದೊಡ್ಡ ಸವಾಲಾಗಿದೆ. ಟಿಟಿಪಿ ಕೂಡ ರಾಜಕೀಯ ಪಕ್ಷಗಳ ದಾಳಿಯಿಂದ ಹಿಂದೆ ಸರಿಯುವುದಿಲ್ಲ. ಏಕೆಂದರೆ ಆತನಿಗೂ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಆಡಳಿತ ಬೇಕು.
ವಿಫಲ ರಾಜ್ಯ ಎಂದರೇನು? ಸಾರ್ವಭೌಮ ರಾಷ್ಟ್ರದ ಮೂಲಭೂತ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾದ ಸರ್ಕಾರವನ್ನು ವಿಫಲ ರಾಜ್ಯ ಎನ್ನಲಾಗುತ್ತಿದೆ. ಉದಾಹರಣೆಗೆ ಸೇನಾ ರಕ್ಷಣೆ, ಕಾನೂನು ಜಾರಿ, ನ್ಯಾಯ, ಶಿಕ್ಷಣ, ಅಥವಾ ಆರ್ಥಿಕ ಸ್ಥಿರತೆ. ರಾಜ್ಯಗಳ ಸಾಮಾನ್ಯ ಗುಣಲಕ್ಷಣಗಳಾದ ನಾಗರಿಕ ಹಿಂಸಾಚಾರ, ಭ್ರಷ್ಟಾಚಾರ, ಅಪರಾಧ, ಬಡತನ, ಅನಕ್ಷರತೆ ಮತ್ತು ಕುಸಿಯುತ್ತಿರುವ ಮೂಲಸೌಕರ್ಯಗಳನ್ನು ಒಳಗೊಂಡಿವೆ. ಒಂದು ರಾಜ್ಯ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅದು ಜನರ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಕಳೆದುಕೊಂಡರೆ, ಅದು ವಿಫಲ ರಾಜ್ಯವಾಗಬಹುದು.
ಇದನ್ನೂಓದಿ:ಹೆಚ್ಚುವರಿ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ್ಧತೆ: ಪ್ರಸಕ್ತ ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ?