ರಾಯಗಢ(ಒಡಿಶಾ): ಗಣರಾಜ್ಯೋತ್ಸವದಂದು ಸಾಮಾಜಿಕ ಕಾರ್ಯಕರ್ತೆ ಮತ್ತು ಒಡಿಶಾದ ರಾಯಗಡ ಜಿಲ್ಲೆಯ ಗಾಂಧಿವಾದಿ ಮುಖಂಡೆ ಶಾಂತಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳೆದ ಅರವತ್ತು ವರ್ಷಗಳಿಂದ ಶಾಂತಿ ದೇವಿಯವರು ಸಾಮಾಜಿಕ ಸೇವೆಯನ್ನು ತಮ್ಮ ಜೀವನದ ಮುಖ್ಯ ವಸ್ತುವನ್ನಾಗಿಸಿಕೊಂಡು ಬಂದಿದ್ದು, ಸಾಮಾಜಿಕ ಕಾರ್ಯಗಳಿಗೆ ಅವರ ಕೊಡುಗೆ ಕೇವಲ ರಾಯಗಢ ಜಿಲ್ಲೆಗೆ ಸೀಮಿತವಾಗಿರದೇ, ಒಡಿಶಾ ರಾಜ್ಯಾದ್ಯಂತ ಹರಡಿದೆ. ಈ ಕ್ಷೇತ್ರಕ್ಕೆ ಅವರು ನೀಡಿರುವ ಗಮನಾರ್ಹ ಕೊಡುಗೆಗಳಿಗಾಗಿ ಅವರಿಗೆ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗೌರವ ಒಲಿದು ಬಂದಿದೆ.
1951ರಲ್ಲಿ ಅವಿಭಜಿತ ಕೊರಾಪುಟ್ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಬಂದೊದಗಿತ್ತು. ಇದನ್ನು ಮನಗಂಡ ಶಾಂತಿಯವರು ಅಲ್ಲಿ ಬಳಲುತ್ತಿದ್ದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದರು. ಅಲ್ಲಿಂದ ಅವರ ಜೀವನ ತಿರುವು ಪಡೆಯಿತು. ಶಾಂತಿ ದೇವಿ ಏಪ್ರಿಲ್ 18, 1934 ರಂದು ಜನಿಸಿದರು. ಅವರ ವಿವಾಹವನ್ನು 1951 ರಲ್ಲಿ ಸಾಮಾಜಿಕ ಕಾರ್ಯಕರ್ತ ಡಾ.ರತನ್ ದಾಸ್ ಅವರೊಂದಿಗೆ ನಡೆಸಲಾಯಿತು. ಬಾಲ್ಯದಿಂದಲೂ ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ, ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ನಂತರ ಗಾಂಧಿವಾದಿ ತತ್ತ್ವಶಾಸ್ತ್ರದಿಂದ ಪ್ರಭಾವಿತರಾದ ಶಾಂತಿಯವರು ಗೋಪಾಬಂಧು ಚೌಧರಿ ಅವರು ಸ್ಥಾಪಿಸಿದ ಗಾಂಧಿ ಆಶ್ರಮಕ್ಕೆ ಸೇರಿದರು.
ಭೂ ಸತ್ಯಾಗ್ರಹದಲ್ಲಿ ಶಾಂತಿದೇವಿ ಪಾತ್ರ:
1952 ರಲ್ಲಿ ಅವಿಭಜಿತ ಕೊರಾಪುಟ್ ಜಿಲ್ಲೆಯಲ್ಲಿ ಮುಂದುವರೆದಿದ್ದ ಭೂ ಸತ್ಯಾಗ್ರಹ ಚಳವಳಿಯಲ್ಲಿ ಶಾಂತಿ ದೇವಿ ತಮ್ಮನ್ನು ತಾವು ತೊಡಗಿಸಿಕೊಂಡು ಭೂಮಾಲೀಕರಿಂದ ಬಲವಂತವಾಗಿ ದೋಚಲ್ಪಟ್ಟ ಬುಡಕಟ್ಟು ಜನರ ಭೂಮಿಯನ್ನು ಮುಕ್ತಗೊಳಿಸಲು ಮುಂದಾದರು. ನಂತರ ಬೋಲಂಗೀರ್, ಕಲಹಂಡಿ ಮತ್ತು ಸಂಬಲ್ಪುರ ಜಿಲ್ಲೆಗಳಲ್ಲಿ ಭೂದಾನ್ ಚಳವಳಿ ನಡೆಸಿದರು. ಮಾಪಾತಿ ದೇವಿ (ಒಡಿಶಾದ ಮಾಜಿ ಮುಖ್ಯಮಂತ್ರಿ ನಬಾ ಕೃಷ್ಣ ಚೌಧರಿ ಅವರ ಪತ್ನಿ) ಸ್ಥಾಪಿಸಿದ ಗೋಪಾಲ್ಬಾದಿಯ ಆಶ್ರಮದಲ್ಲಿ ಅವರು ಭೂದಾನ್ ಕಾರ್ಮಿಕರಿಗೆ ತರಬೇತಿ ನೀಡಿದರು. ಆ ಅವಧಿಯಲ್ಲಿ ಅವರು ಸಂಕಲ್ಪದಾರ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 40 ಬುಡಕಟ್ಟು ಜನರ ಬಿಡುಗಡೆಗಾಗಿ ಕೆಲಸ ಮಾಡಿದ್ದರು.
ಅವರು ಬುಡಕಟ್ಟು ಜನರ ನೆರವಿನೊಂದಿಗೆ 1964 ರಲ್ಲಿ ಜಬರ್ಗುಡದಲ್ಲಿ ‘ಸೇವಾ ಸಮಾಜ’ ಸ್ಥಾಪಿಸಿದರು. ಅಲ್ಲಿ ಅವರು ಬಡ ಮತ್ತು ಅನಾಥ ಮಕ್ಕಳಿಗೆ ಆಶ್ರಯ ನೀಡಿ ಆರೈಕೆ ಮಾಡಿ ಸೈ ಎನಿಸಿಕೊಂಡರು.
ನೂರಾರು ಅನಾಥ ಮಕ್ಕಳ ತಾಯಿ:
ಭೂದಾನ ಚಳವಳಿಯ ಪ್ರವರ್ತಕರಾಗಿದ್ದ ದಿವಂಗತ ಡಾ.ರತನ್ ದಾಸ್ ಮತ್ತು ಅವರ ಪತ್ನಿ ಶಾಂತಿ ಇಡೀ ಅವಿಭಜಿತ ಕೊರಾಪುಟ್ ಜಿಲ್ಲೆಯಲ್ಲಿ ಸಾಮಾಜಿಕ ಸೇವಾ ದಂಪತಿಗಳಾಗಿ ಹೆಸರುವಾಸಿಯಾಗಿದ್ದಾರೆ. ಪತಿಯ ಮರಣದ ನಂತರ ಶಾಂತಿ ದೇವಿ ತನ್ನ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮುಂದುವರಿಸಿದ್ದು, ನೂರಾರ ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತಾಯಿಯಾಗಿದ್ದಾರೆ. ತಮ್ಮ ಸಾಮಾಜಿಕ ಸೇವೆಯ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.