ನವದೆಹಲಿ: ದೇಶದಲ್ಲಿ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ಡೋಸ್ ನೀಡುವುದಾಗಿ ಕಳೆದ ತಿಂಗಳು ಘೋಷಿಸಿದ್ದರು.
ಅದರಂತೆ ಜ.10(ಸೋಮವಾರ)ರಂದು ಲಸಿಕಾ ಅಭಿಯಾನ ಆರಂಭವಾಗಿದ್ದು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ 10.5 ಲಕ್ಷಕ್ಕೂ ಹೆಚ್ಚು ಮಂದಿ ಅರ್ಹ ಫಲಾನುಭವಿಗಳು ಮೂರನೇ ಡೋಸ್ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಸೋಮವಾರ 4,91,013 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 1,90,383 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಮತ್ತು 2,54,868 ಮಂದಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್" ನೀಡುವ ಕಾರ್ಯಕ್ರಮ ದೇಶಾದ್ಯಂತ ಜ. 10ರಿಂದ ಪ್ರಾರಂಭವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು ಹೇಳಿದರು.
ಅಲ್ಲದೇ "ಪಿಎಂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಆದ್ಯತೆಯ ಮೇಲೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಹೆಚ್ಚುವರಿ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಅವರು ಅದೇ ಟ್ವೀಟ್‌ನಲ್ಲಿ ತಿಳಿಸಿದ್ದರು. ಕೋವಿನ್ (Cowin) ಪೋರ್ಟಲ್ ಮೂಲಕ ಡೋಸ್‌ಗಾಗಿ ಅಪಾಯಿಂಟ್‌ಮೆಂಟ್‌ಗಳ ಆನ್‌ಲೈನ್ ಬುಕಿಂಗ್ನ್ನು ಶನಿವಾರದಿಂದ ಪ್ರಾರಂಭಿಸಲಾಗಿದೆ. ಬೂಸ್ಟರ್ ಡೋಸ್‌ಗೆ ಹೊಸ ನೋಂದಣಿ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ ಮೊದಲ ದಿನ 10.5 ಲಕ್ಷ ಜನರಿಗೆ ಬೂಸ್ಟರ್ ಡೋಸ್ ನೀಡಿರುವುದಕ್ಕೆ ಪ್ರಧಾನಿ ಮೋದಿ ಬೇಷ್ ಎಂದಿದ್ದಾರೆ.
152.78 ಕೋಟಿ ದಾಟಿದ ವ್ಯಾಕ್ಸಿನೇಷನ್ ಕವರೇಜ್:
ಒಟ್ಟಾರೆಯಾಗಿ, ಸೋಮವಾರ 82 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ನೀಡುವುದರೊಂದಿಗೆ ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ಕವರೇಜ್ 152.78 ಕೋಟಿ ದಾಟಿದೆ
ಜ.6ರಿಂದ ಆರಂಭವಾದ ಲಸಿಕಾ ಅಭಿಯಾನ:
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ (HCWs) ಲಸಿಕೆ ನೀಡುವುದರೊಂದಿಗೆ ದೇಶಾದ್ಯಂತ 2021 ಜನವರಿ 16ರಿಂದ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮುಂಚೂಣಿ ಕಾರ್ಯಕರ್ತರಿಗೆ (FLWs) ಫೆಬ್ರವರಿ 2 ರಿಂದ ಪ್ರಾರಂಭವಾಯಿತು.
ಬಳಿಕ ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರಾರಂಭಿಸಿತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕಾಕರಣಕ್ಕೆ ಅವಕಾಶ ನೀಡುವ ಮೂಲಕ ತನ್ನ ಲಸಿಕೆ ಅಭಿಯಾನವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಕೋವಿಡ್-19 ಲಸಿಕಾ ಅಭಿಯಾನದ ಮುಂದಿನ ಹಂತವು 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಜನವರಿ 3 ರಿಂದ ಆರಂಭವಾಗಿದೆ.
ಇದನ್ನೂ ಓದಿ: ಒಮಿಕ್ರಾನ್ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ: ಅಧ್ಯಯನ