ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ನಡುವೆ, ಜನವರಿ 1 ರ ಬಳಿಕ ಮೊದಲ ಬಾರಿಗೆ ಬುಧವಾರ ರಾಜಧಾನಿಯಲ್ಲಿ 500ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 536 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6.45 ಲಕ್ಷಕ್ಕೂ ಅಧಿಕವಾಗಿದೆ. ಒಂದು ದಿನದಲ್ಲಿ ಸೋಂಕಿತರು ಮತ್ತು ಚೇತರಿಸಿಕೊಂಡವರ ನಡುವಿನ ವ್ಯತ್ಯಾಸ 2,488 ರಿಂದ 2,702 ಕ್ಕೆ ಏರಿದೆ ಎಂದು ಸರ್ಕಾರದ ಆರೋಗ್ಯ ಬುಲೆಟಿನ್ ತಿಳಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ 2ನೇ ಅಲೆ: 24 ಗಂಟೆಯಲ್ಲಿ 23 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ!
ದೇಶದ ಒಟ್ಟು ಸೋಂಕಿತರ 1.14 ಕೋಟಿ ತಲುಪಿದ್ದು, ಯುಎಸ್ ಮತ್ತು ಬ್ರೆಝಿಲ್ ಬಳಿಕ ಮೂರನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಾವು ಕೋವಿಡ್ ಎರಡನೇ ಅಲೆಯನ್ನು ಇಲ್ಲಿಯೇ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಹೇಳಿದ ಪ್ರಧಾನಿ, ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕು. ಮಾಸ್ಕ್, ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ, ಸುಮಾರು 70 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಶೇ. 150 ಕ್ಕಿಂತ ಹೆಚ್ಚಾಗಿದೆ. ನಾವು ಇದನ್ನು ಇಲ್ಲಿಗೆ ತಡೆಗಟ್ಟದಿದ್ದರೆ, ದೇಶವ್ಯಾಪಿ ಹರಡಬಹುದು ಎಂದು ಪ್ರಧಾನಿ ಹೇಳಿದ್ದಾರೆ.