ಚಂಡೀಗಢ (ಹರಿಯಾಣ): ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್) ಕಳೆದ ಎರಡು ದಿನಗಳಲ್ಲಿ 87 ನಿವಾಸಿ ವೈದ್ಯರು ಸೇರಿದಂತೆ 146ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಸೋಂಕಿತರಿಗೆ ರೋಗ ಲಕ್ಷಣಗಳು ಸೌಮ್ಯವಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಮತ್ತು ಅವರೆಲ್ಲರೂ ವೈದ್ಯರ ನಿರಂತರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಪ್ರೊಫೆಸರ್ ವಿಕೆಎಸ್ ಲಕ್ಷ್ಮಿ ತಿಳಿಸಿದ್ದಾರೆ. ಇನ್ನು ಕಳೆದ 10 ದಿನಗಳಲ್ಲಿ ಚಂಡೀಗಢದ ಸೆಕ್ಟರ್ 16 ಆಸ್ಪತ್ರೆ ಮತ್ತು ಸೆಕ್ಟರ್ 32 ಆಸ್ಪತ್ರೆಯಲ್ಲಿ 196ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಕೋವಿಡ್ ದೃಢಪಟ್ಟಿದೆ.
ಇದನ್ನೂ ಓದಿ: ವೈದ್ಯರಿಗೆ ಹೆಚ್ಚು ಅಂಟುತ್ತಿರುವ ಕೊರೊನಾ: ಆಸ್ಪತ್ರೆ ಭೇಟಿ ತಪ್ಪಿಸುವಂತೆ ಜನರಿಗೆ ತಜ್ಞರ ಸಲಹೆ
ಹರಿಯಾಣದಲ್ಲಿ ದಿಢೀರನೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ನಿನ್ನೆ ಒಂದೇ ದಿನದಲ್ಲಿ 2,176 ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 1,178ಕ್ಕೂ ಹೆಚ್ಚು ಕೇಸ್ಗಳು ಗುರುಗ್ರಾಮ್ ಜಿಲ್ಲೆಯಲ್ಲಿ ವರದಿಯಾಗಿದೆ. 2,176 ಹೊಸ ಕೋವಿಡ್ ಪ್ರಕರಣಗಳಲ್ಲಿ 35 ಒಮಿಕ್ರಾನ್ ಕೇಸ್ಗಳಾಗಿದ್ದು, ರಾಜ್ಯದ ಒಮಿಕ್ರಾನ್ ಸೋಂಕಿತರ ಸಂಖ್ಯೆ 106ಕ್ಕೆ ಹೆಚ್ಚಳವಾಗಿದೆ.