ರಾಂಚಿ (ಜಾರ್ಖಂಡ್): ಮುಂಗಾರುಮಳೆಯ ಕೊರತೆಯಿಂದಾಗಿ ಜಾರ್ಖಂಡ್‌ನಲ್ಲಿ ಬರಗಾಲ ತಾಂಡವವಾಡುತ್ತಿದೆ. ರಾಸುಗಳಿಗೆ ನೀರು, ಮೇವಿನ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಚರ್ಮಗಂಟು ರೋಗವೂ ವಕ್ಕರಿಸಿಕೊಂಡಿದ್ದು, 1 ಸಾವಿರಕ್ಕೂ ಅಧಿಕ ಗೋವುಗಳು ವೈರಸ್ಗೆ ಬಲಿಯಾಗಿವೆ. ಇದು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಕಳೆದೊಂದು ವಾರದಲ್ಲಿ ಚತ್ರಾ, ಗರ್ವಾ, ಪಲಾಮು, ಲತೇಹರ್, ಸಾಹಿಬ್‌ಗಂಜ್, ಗೊಡ್ಡಾ, ದುಮ್ಕಾ, ಗುಮ್ಲಾ, ರಾಮಗಢ ಮತ್ತು ಹಜಾರಿಬಾಗ್ ಜಿಲ್ಲೆಗಳಲ್ಲಿ ವೈರಸ್ ತೀವ್ರ ಸಮಸ್ಯೆ ಉಂಟು ಮಾಡಿದೆ.
ರಾಜ್ಯದಲ್ಲಿ ಒಂದೆಡೆ ಬರ ಬಿದ್ದಿದ್ದರೆ, ಇನ್ನೊಂದೆಡೆ ರೋಗದ ಬಾಧೆ. ಇದು ರೈತರನ್ನು ಹಿಂಡಿಹಿಪ್ಪೆ ಮಾಡಿದೆ. ಲಂಪಿ ವೈರಸ್ನಿಂದ (ಚರ್ಮಗಂಟು ರೋಗ) ರಾಸುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ದನ ಕರುಗಳಿಗೆ ಮಾರಣಾಂತಿಕ ಕಾಯಿಲೆ ತರುವ ಈ ವೈರಸ್ ನಿಯಂತ್ರಣಕ್ಕೆ ಪಶುಸಂಗೋಪನಾ ಇಲಾಖೆ ನಾನಾ ಕಸರತ್ತು ಮಾಡುತ್ತಿದೆ. ಆದಾಗ್ಯೂ ಇದು ತೀವ್ರ ಬಾಧೆ ಸೃಷ್ಟಿಸಿದೆ.
ಜಾನುವಾರುಗಳ ದೇಹದಲ್ಲಿ ಗಂಟು ಸೃಷ್ಟಿ ಮಾಡುವ ಈ ವೈರಸ್, 10 ದಿನಗಳಲ್ಲಿ ಪ್ರಾಣ ಬಲಿ ಪಡೆಯುತ್ತದೆ. ವೈರಸ್ ಸೋಕಿದ ಬಳಿಕ ರಾಸುಗಳು ಆಹಾರ, ನೀರನ್ನು ತ್ಯಜಿಸುತ್ತಿವೆ. ಇದರಿಂದ ತೀವ್ರ ಅಸ್ವಸ್ಥವಾಗಿ ಸಾವಿಗೀಡಾಗುತ್ತಿವೆ. ರಾಸುಗಳಲ್ಲಿ ರೋಗಲಕ್ಷಣಗಳನ್ನು ಪತ್ತೆ ಮಾಡಿದ ನಂತರ, ಪಶುಸಂಗೋಪನಾ ಇಲಾಖೆ ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಲಸಿಕಾ ಆಂದೋಲನವನ್ನು ನಡೆಸುತ್ತಿದೆ.
ಅಧಿಕಾರಿಗಳ ರಜೆ ರದ್ದು ; ಚರ್ಮಗಂಟು ರೋಗ ಅದೆಷ್ಟು ಆತಂಕ ಸೃಷ್ಟಿಸಿದೆ ಎಂದರೆ, ಇದರ ತಡೆ ಮತ್ತು ರಾಸುಗಳ ರಕ್ಷಣೆಗಾಗಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ರಜೆಗಳನ್ನೇ ಸರ್ಕಾರ ರದ್ದು ಮಾಡಿದೆ. ಆರಂಭದಲ್ಲಿಯೇ ರೋಗಲಕ್ಷಣಗಳನ್ನು ಗುರುತಿಸಿ ಅಂತಹ ರಾಸುಗಳಿಂದ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗಳಿಗೆ ಕಳುಹಿಸುವಂತೆ ಎಲ್ಲ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ. ಪ್ರಾಣಿಗಳ ಸ್ವ್ಯಾಬ್‌ಗಳನ್ನು ಪರೀಕ್ಷೆಗೆ ಕಳುಹಿಸುವಾಗ ಕೋಲ್ಡ್ ಚೈನ್ ಅನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡ 10 ದಿನಗಳಲ್ಲಿ ಪ್ರಾಣಿಗಳು ಸಾಯುತ್ತಿವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ವೈರಸ್ ಸೋಂಕಿತ ನೊಣಗಳು, ಸೊಳ್ಳೆಗಳು ಮತ್ತು ಜೀವಿಗಳ ಕಡಿತದಿಂದ ದನಗಳಲ್ಲಿ ಈ ರೋಗವು ಉಂಟಾಗುತ್ತದೆ. ಇದು ಕರುಗಳಿಗೂ ಹರಡುತ್ತಿದೆ. ರೋಗಬಾಧಿತ ಪ್ರಾಣಿಗಳ ಮೂಗು, ಬಾಯಿ ಮತ್ತು ಗಾಯಗಳಿಂದ ಸ್ವ್ಯಾಬ್ ತೆಗೆದಾಗಲೂ ಸೋಂಕು ಹರಡುತ್ತಿರುವುದು ಆತಂಕದ ವಿಚಾರವಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ ವೈದ್ಯ.. ಎಲ್ಲಿದೆ ಗೊತ್ತಾ ಆ ಕ್ಲಿನಿಕ್!