ನವದೆಹಲಿ: ಉದ್ಯೋಗ ನೇಮಕಾತಿಗಳಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸಿ ಅವನ್ನು ಹೆಚ್ಚು ಸುವ್ಯವಸ್ಥಿತ ಮತ್ತು ಸಮಯ ಬದ್ಧವಾಗಿಸುವ ಮೂಲಕ ತಮ್ಮ ಸರ್ಕಾರವು ವ್ಯಾಪಕ ಬದಲಾವಣೆಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡವರಿಗೆ 71,426 ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಮೋದಿ, ಸದ್ಯ ನಡೆಯುತ್ತಿರುವ 'ರೋಜಗಾರ್ ಮೇಳ' ಕಾರ್ಯಕ್ರಮಗಳು ತಮ್ಮ ಸರ್ಕಾರದ ಗುರುತಾಗಿವೆ ಎಂದು ಹೇಳಿದರು. ನಮ್ಮ ಸರ್ಕಾರ ಏನು ಮಾಡಬೇಕೆಂದು ಸಂಕಲ್ಪ ಮಾಡುತ್ತದೆಯೋ ಅದನ್ನು ಪೂರೈಸುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.
ಕಳೆದ ವರ್ಷ 10 ಲಕ್ಷ ಜನರಿಗೆ ಉದ್ಯೋಗ ನೀಡುವ 'ರೋಜ್‌ಗಾರ್ ಮೇಳ' ಅಭಿಯಾನವನ್ನು ಪ್ರಧಾನಿ ಘೋಷಿಸಿದ್ದರು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ಹಲವಾರು ರಾಜ್ಯಗಳು ಸಹ ಇಂಥ ಮೇಳಗಳನ್ನು ಆಯೋಜಿಸುತ್ತಿರುವುದನ್ನು ಪ್ರಧಾನಿ ಉಲ್ಲೇಖಿಸಿದರು. ಮತ್ತಷ್ಟು ರಾಜ್ಯಗಳು ಇಂಥ ಮೇಳಗಳನ್ನು ಶೀಘ್ರದಲ್ಲೇ ಆಯೋಜಿಸಲಿವೆ ಎಂದು ಹೇಳಿದ್ದಾರೆ.
ನೇಮಕಾತಿ ಪತ್ರ ಪಡೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಸೇವೆಗೆ ಸಂಕಲ್ಪ ಮಾಡುವಂತೆ ಕೋರಿದರು ಮತ್ತು ವ್ಯವಹಾರದಲ್ಲಿ ಗ್ರಾಹಕರು ಯಾವಾಗಲೂ ಸರಿ ಎಂದು ಗುರುತಿಸುವಂತೆ ನಾಗರಿಕರು ಯಾವಾಗಲೂ ಸರಿ ಎಂಬುದೇ ಆಡಳಿತ ವ್ಯವಸ್ಥೆಯಲ್ಲಿ ಮಂತ್ರವಾಗಬೇಕು. ಆದ್ದರಿಂದಲೇ ಸರಕಾರಿ ವಲಯದ ಉದ್ಯೋಗವನ್ನು ಸರಕಾರಿ ಸೇವೆ ಎನ್ನಲಾಗುತ್ತದೆಯೇ ಹೊರತು ಉದ್ಯೋಗಗಳಲ್ಲ ಎಂದರು. ಕುಟುಂಬದ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿಲ್ಲದ ಕುಟುಂಬಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಪಡೆದಿರುವುದನ್ನು ಪ್ರಧಾನಿ ಗಮನಿಸಿದರು. ಪಾರದರ್ಶಕ ಮತ್ತು ಸ್ಪಷ್ಟ ನೇಮಕಾತಿ ಪ್ರಕ್ರಿಯೆಯು ಜನರ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ಮನ್ನಣೆ ನೀಡುತ್ತದೆ ಎಂದು ಅವರು ಹೇಳಿದರು.
ಮೂಲಸೌಕರ್ಯ ವಲಯದಲ್ಲಿ ಬೃಹತ್ ಹೂಡಿಕೆಯು ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ ಎಂದು ಮೋದಿ ಹೇಳಿದರು. ಅಭಿವೃದ್ಧಿಯ ಬೆಳವಣಿಗೆಯು ತ್ವರಿತ ಗತಿಯಲ್ಲಿ ನಡೆದಾಗ, ಸ್ವ - ಉದ್ಯೋಗದ ಅವಕಾಶಗಳು ಶೀಘ್ರವಾಗಿ ಏರುತ್ತವೆ ಎಂದು ಅವರು ಹೇಳಿದರು. ಮೂಲಸೌಕರ್ಯ ವಲಯದಲ್ಲಿ ಬೃಹತ್ ಹೂಡಿಕೆಯು ಉದ್ಯೋಗ ಮತ್ತು ಸ್ವಯಂ ಉದ್ಯೋಗವಕಾಶಗಳನ್ನು ಹೆಚ್ಚಿಸಿದೆ. ಅಭಿವೃದ್ಧಿಯ ಬೆಳವಣಿಗೆಯು ತ್ವರಿತ ಗತಿಯಲ್ಲಿ ನಡೆದಾಗ, ಸ್ವ-ಉದ್ಯೋಗದ ಅವಕಾಶಗಳು ಶೀಘ್ರವಾಗಿ ಏರುತ್ತವೆ ಎಂದು ಅವರು ತಿಳಿಸಿದರು.
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಮೋದಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ 'ರೋಜ್‌ಗಾರ್ ಮೇಳ' ಒಂದು ಹೆಜ್ಜೆಯಾಗಿದೆ ಎಂದು ಪಿಎಂಒ ಈ ಹಿಂದೆ ಹೇಳಿತ್ತು. 'ರೋಜ್‌ಗಾರ್ ಮೇಳ' ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ಪಿಎಂಒ ಹೇಳಿದೆ.
ದೇಶಾದ್ಯಂತ ಆಯ್ಕೆಯಾದ ಹೊಸ ನೇಮಕಾತಿಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಜೂನಿಯರ್ ಇಂಜಿನಿಯರ್‌ಗಳು, ಲೋಕೋ ಪೈಲಟ್‌ಗಳು, ತಂತ್ರಜ್ಞರು, ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್, ಸ್ಟೆನೋಗ್ರಾಫರ್, ಜೂನಿಯರ್ ಅಕೌಂಟೆಂಟ್, ಗ್ರಾಮೀಣ ದಾಕ್ ಸೇವಕ್, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು, ಶಿಕ್ಷಕರು, ದಾದಿಯರು ಮುಂತಾದ ವಿವಿಧ ಹುದ್ದೆಗಳಿಗೆ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: 29 ರಂದು ಪಂಜಾಬ್ ಪಟಿಯಾಲಕ್ಕೆ ಅಮಿತ ಶಾ: ಲೋಕಸಭೆಗೆ ಗರಿಷ್ಠ ಸ್ಥಾನ ಗೆಲ್ಲಲ್ಲು ಹೊಸ ರಣತಂತ್ರ