ಜಲೋರ್ (ರಾಜಸ್ಥಾನ): ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದರು. ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಸಂಸದ, ಫೈನಲ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕೆಟ್ಟ ಶಕುನ (ಪ್ರಧಾನಿ ಮೋದಿ)ವೊಂದು ಬಂದು ಕ್ರೀಡಾಂಗಣದಲ್ಲಿ ಕೂತಿತು. ಹೀಗಾಗಿ ನಮ್ಮ ಕ್ರಿಕೆಟ್ ತಂಡ ಪಂದ್ಯ ಸೋತಿತು ಎಂದು ಕಟುವಾಗಿ ಟೀಕಿಸಿದರು.
ಅಹಮದಾಬಾದ್ನಲ್ಲಿ ನವೆಂಬರ್ 19 ರಂದು ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ಬಹುತೇಕ ಚೆನ್ನಾಗಿಯೇ ಆಡಿತು. ನಮ್ಮ ಹುಡುಗರು ಇನ್ನೇನು ವಿಶ್ವಕಪ್ ಗೆಲ್ಲಬೇಕು ಅನ್ನುವಷ್ಟರಲ್ಲಿ ಪನೌತಿ (ಕೆಟ್ಟ ಶಕುನ) ಕ್ರೀಡಾಂಗಣಕ್ಕೆ ಬಂದಿತು. ಇದು ಟ್ರೋಫಿಯನ್ನು ಕಳೆದುಕೊಳ್ಳುವಂತೆ ಮಾಡಿತು ಎಂದು ಪ್ರಧಾನಿ ಮೋದಿ ಅವರು ಮೈದಾನಕ್ಕೆ ಬಂದಿದ್ದನ್ನು ಟೀಕಿಸಿದರು. ಇದನ್ನು ಕೇಳಿದ ಸಭಿಕರು ಗೊಳ್ಳೆಂದು ನಕ್ಕರು.
ವಿಶ್ವಕಪ್ನಲ್ಲಿ ಸೋತ ಬಳಿಕ ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್ ರೂಮಿಗೆ ತೆರಳಿ ಪ್ರತಿಯೊಬ್ಬ ಆಟಗಾರರ ಭೇಟಿ ಮಾಡಿ ಬೆನ್ನು ತಟ್ಟಿದ ವಿಡಿಯೋ ತುಣುಕನ್ನು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂತಹ ಹೇಳಿಕೆ ನೀಡಿದ್ದಾರೆ.
ಆಟಗಾರರಿಗೆ ಧೈರ್ಯ ತುಂಬಿದ ಪ್ರಧಾನಿ: ಪಂದ್ಯ ಸೋತ ಬಳಿಕ ನಿರಾಸೆಯಲ್ಲಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಧೈರ್ಯ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮಿಗೆ ತೆರಳಿದ್ದರು. ಆಟಗಾರರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಕೈಗಳನ್ನು ಹಿಡಿದುಕೊಂಡು ನೀವು ತಂಡದ ಶಕ್ತಿ. ಕೆಲವೊಮ್ಮೆ ಕೆಟ್ಟ ದಿನದಲ್ಲಿ ಹೀಗೆಲ್ಲಾ ಆಗುತ್ತದೆ. ಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಸಾಂತ್ವನದ ಮಾತುಗಳನ್ನಾಡಿದ್ದರು.
ಆಟದಲ್ಲಿ ಸೋಲು ಸಹಜ. ಈಗಾಗಲೇ ನೀವು ಸತತ 10 ಪಂದ್ಯಗಳನ್ನು ಗೆದ್ದಿದ್ದೀರಿ. ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಇದೆ. ಮುಂದೆ ಪುಟಿದೆದ್ದು ಬರೋಣ ಎಂದು ಬೆನ್ನು ತಟ್ಟಿದರು. ಬಳಿಕ ಪ್ರತಿ ಆಟಗಾರನ ಬಳಿಗೆ ತೆರಳಿ ಕೈಕುಲುಕಿ ಧೈರ್ಯವಾಗಿರಿ ಎಂದಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊಹಮ್ಮದ್ ಶಮಿಯನ್ನು ಅಪ್ಪಿಕೊಂಡು, ಅವರ ಆಟವನ್ನು ಶ್ಲಾಘಿಸಿದರು. ಈ ವಿಡಿಯೋವನ್ನು ಮೋದಿ ಮತ್ತು ಪ್ರಧಾನಿ ಕಚೇರಿಯ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದಕ್ಕೂ ಮೊದಲು ಎಕ್ಸ್ ಖಾತೆಯಲ್ಲಿ ಟೀಂ ಇಂಡಿಯಾ ಬಗ್ಗೆ ಬರೆದುಕೊಂಡಿದ್ದ ಪ್ರಧಾನಿ ಮೋದಿ, ಪ್ರೀತಿಯ ಟೀಮ್ ಇಂಡಿಯಾ, ವಿಶ್ವಕಪ್ ಟೂರ್ನಿಯಲ್ಲಿ ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪವು ಎದ್ದು ಕಾಣುತ್ತಿದೆ. ಅತ್ಯುತ್ಸಾಹದಲ್ಲಿ ಆಡಿದ್ದೀರಿ. ಈ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ಸೋಲು ಗೆಲುವಿನಲ್ಲಿ ನಿಮ್ಮೊಂದಿಗೆ ನಾವಿದ್ದೇ ಎಂದು ಹೇಳಿದ್ದರು.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಂಗೆ ತೆರಳಿ ಸೋಲಿನ ನೋವಿನಲ್ಲಿದ್ದ ಭಾರತದ ಕ್ರಿಕೆಟಿಗರಿಗೆ ಧೈರ್ಯ ತುಂಬಿದ ಮೋದಿ- ವಿಡಿಯೋ