ನವದೆಹಲಿ: ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ದೇಶದ ಪ್ರಜಾಪ್ರಭುತ್ವದ ಕುರಿತ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹಿಸುತ್ತಿದೆ. ಮತ್ತೊಂದೆಡೆ, ಉದ್ಯಮಿ ಗೌತಮ್ ಅದಾನಿ ವಿಷಯವಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗಾಗಿ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಇದರ ಪರಿಣಾಮ ಶುಕ್ರವಾರ ಸತತ ಐದನೇ ದಿನವೂ ಸುಗಮವಾಗಿ ಸಂಸತ್ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಆರಂಭವಾದ ಕೆಲ ಹೊತ್ತಿನಲ್ಲೇ ಸದನ ಮುಂದೂಡಲ್ಪಡುತ್ತಿದೆ. ಇದರ ನಡುವೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ಪ್ರತಿಪಕ್ಷಗಳು ಸೋಮವಾರ ಒಟ್ಟಾಗಿ ಸಭೆ ನಡೆಸಲು ನಿರ್ಧರಿಸಿವೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಯಾವುದೇ ತಪ್ಪನ್ನು ಹೇಳಿಲ್ಲ. ಆದರೆ, ಪ್ರಧಾನಿ ಮೋದಿ ಮತ್ತು ಅದಾನಿ ನಂಟಿನ ವಿವಾದದಿಂದ ಪಾರಾಗಲು ಆಡಳಿತ ಪಕ್ಷವೇ ಸದನದ ಕಲಾಪಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಇದೇ ವಿಷಯವಾಗಿ 'ಈಟಿವಿ ಭಾರತ್' ಜೊತೆ ಮಾತನಾಡಿದ ಜೆಡಿಯು ನಾಯಕ ಕೆಸಿ ತ್ಯಾಗಿ, ''ರಾಹುಲ್ ಗಾಂಧಿ ಏಕೆ ಕ್ಷಮೆಯಾಚಿಸಬೇಕು?. ಅವರು ತಪ್ಪೇನೂ ಹೇಳಿಲ್ಲ. ಅದಾನಿ ವಿವಾದವನ್ನು ತಪ್ಪಿಸಲು ಬಿಜೆಪಿ ಮತ್ತು ಮಿತ್ರಪಕ್ಷಗಳು ಸದನದ ಕಲಾಪಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ" ಎಂದರು.
ಇದನ್ನೂ ಓದಿ: ಸಂಸತ್ತಿನಲ್ಲಿ ಅದಾನಿ, ರಾಹುಲ್ ಹೇಳಿಕೆ ಗದ್ದಲ: ಅಧಿವೇಶನ ಮತ್ತೆ ಮುಂದೂಡಿಕೆ; ಕಾಂಗ್ರೆಸ್ ಪ್ರತಿಭಟನೆ
''ಈ ವಿಷಯವಾಗಿ ಎಲ್ಲ ಪ್ರತಿಪಕ್ಷಗಳು ಸೋಮವಾರ ಬೆಳಗ್ಗೆ ಸಭೆ ಸೇರಲಿವೆ. ಒಟ್ಟಾಗಿ ಕುಳಿತು ತಮ್ಮ ಮುಂದಿನ ನಡೆಯನ್ನು ರೂಪಿಸಲಿವೆ. ಅದಾನಿ ಹಗರಣದ ಹಿಂಡನ್‌ಬರ್ಗ್ ಬಹಿರಂಗದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗಾಗಿ ನಾವು ನಮ್ಮ ಬೇಡಿಕೆಯನ್ನು ಎತ್ತುತ್ತಲೇ ಇರುತ್ತೇವೆ" ಎಂದು ತ್ಯಾಗಿ ತಿಳಿಸಿದರು. ಆರ್‌ಎಸ್‌ಪಿ ಸಂಸದ ಪ್ರೇಮ ಚಂದ್ರನ್ ಪ್ರತಿಕ್ರಿಯಿಸಿ, "ಜೆಪಿಸಿ ತನಿಖೆ ಕುರಿತ ಪ್ರತಿಪಕ್ಷಗಳ ಬೇಡಿಕೆಯನ್ನು ದಾರಿ ತಪ್ಪಿಸುವುದೇ ಸರ್ಕಾರದ ಏಕೈಕ ಉದ್ದೇಶವಾಗಿದೆ. ಸರ್ಕಾರವು ಶುದ್ಧವಾಗಿದ್ದರೆ, ಜೆಪಿಸಿ ರಚಿಸಿ ಸದನ ನಡೆಸುವುದರಿಂದ ಏನು ನಷ್ಟವಾಗಲಿದೆ'' ಎಂದು ಪ್ರಶ್ನಿಸಿದರು.
''ಆಡಳಿತ ಪಕ್ಷಕ್ಕೆ ಸದನವನ್ನು ನಡೆಸುವ ಮನಸ್ಥಿತಿ ಇಲ್ಲ. ಅದಾನಿ ವಿವಾದದ ಬಗ್ಗೆ ಪ್ರತಿಪಕ್ಷಗಳ ಜೆಪಿಸಿ ಬೇಡಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಜೆಪಿಸಿ ತನಿಖೆಯ ಬೇಡಿಕೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ. ಸೋಮವಾರ ಕಲಾಪ ಪ್ರಾರಂಭವಾಗುವ ಮೊದಲು ನಾವು ಎಲ್ಲರೂ ಒಟ್ಟಿಗೆ ಸಭೆ ನಡೆಸಲಿದ್ದೇವೆ'' ಎಂದು ಹೇಳಿದರು. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮಾತನಾಡಿ, ''ಸದನದ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ದುರದೃಷ್ಟವಶಾತ್ ಸರ್ಕಾರವೇ ಸದನದಲ್ಲಿ ಗದ್ದಲ ಎಬ್ಬಿಸುವಲ್ಲಿ ತೊಡಗಿದೆ. ಪ್ರತಿಪಕ್ಷಗಳ ಮಾತು ಕೇಳಲು ಕೂಡ ಸರ್ಕಾರ ಸಿದ್ಧವಿಲ್ಲ'' ಎಂದು ಕಿಡಿಕಾಡಿದರು.
ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 13ರಂದು ಪ್ರಾರಂಭವಾಗಿದೆ. ಆದರೆ, ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದಿಂದಾಗಿ ಉಭಯ ಸದನಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಆರೋಪಗಳಿಗೆ ಉತ್ತರ ನೀಡಲು ಸಿದ್ಧ ಎಂದು ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ಮತ್ತೊಂದೆಡೆ, ರಾಹುಲ್ ಮೊದಲು ಕ್ಷಮೆಯಾಚಿಸದ ಹೊರತು ಮಾತನಾಡಲು ಪಕ್ಷ ಬಿಡುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದರ ನಡುವೆ ಗಮನಾರ್ಹ ವಿಷಯವೆಂದರೆ ಆಡಳಿತ ಮತ್ತು ಪ್ರತಿಪಕ್ಷಗಳ ಘೋಷಣೆಗಳು ಎದ್ದಾಗ ಕಲಾಪಗಳ ಆಡಿಯೋವನ್ನು ಮ್ಯೂಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್