ನವದೆಹಲಿ: 26 ವಿರೋಧ ಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಗೆ 'ಇಂಡಿಯಾ' ಹೆಸರನ್ನು ಬಳಸದಂತೆ ತಡೆಯಲು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ 26 ವಿರೋಧ ಪಕ್ಷಗಳು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31 ರಂದು ನಡೆಯಲಿದೆ.
'ಇಂಡಿಯಾ' (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಹೆಸರಿನ 26 ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ, ಚುನಾವಣಾ ಆಯೋಗ ಮತ್ತು ವಿರೋಧ ಪಕ್ಷಗಳಿಗೆ ನೋಟಿಸ್ ಕಳುಹಿಸುವ ಮೂಲಕ ನ್ಯಾಯಾಲಯ ಉತ್ತರ ಕೇಳಿದೆ. ವಿಚಾರಣೆ ವೇಳೆ ಅರ್ಜಿದಾರರು 'ಇಂಡಿಯಾ' ಪದ ಬಳಕೆ ನಿಷೇಧಿಸುವಂತೆ ಮಧ್ಯಂತರ ಆದೇಶ ನೀಡುವಂತೆ ಕೋರಿದ್ದರು. ಈ ಕುರಿತು ನ್ಯಾಯಾಲಯವು ಇನ್ನೊಂದು ಕಡೆಯವರ ವಾದವನ್ನು ಆಲಿಸಬೇಕು ಎಂದು ಹೇಳಿದೆ.
ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟವನ್ನು ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ಹೆಸರಿಸುವುದರ ವಿರುದ್ಧ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್ ಎಲ್ಲ 26 ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ನರುಲಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆ) ಕಾಯಿದೆ, 1950ರ ಸೆಕ್ಷನ್ 2 ಮತ್ತು 3 ಅಡಿ 'ಇಂಡಿಯಾ' ಎಂಬ ಹೆಸರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಅರ್ಜಿದಾರ ಗಿರೀಶ್ ಭಾರದ್ವಾಜ್ ಅರ್ಜಿಯಲ್ಲಿ ಉಲ್ಲೆಖಿಸಿದ್ದಾರೆ. ಅರ್ಜಿದಾರರ ಪರ ವಕೀಲ ವೈಭವ್ ಸಿಂಗ್ ಅವರು ಈ ಪ್ರಕರಣದಲ್ಲಿ ಇತರ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಬೇಕು. ಅಲ್ಲದೇ ಈ ವಿಷಯದಲ್ಲಿ ಆರಂಭಿಕ ದಿನಾಂಕವನ್ನು ನೀಡಬೇಕು ಎಂದು ಕೋರಿದರು.
ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ: ಕುತೂಹಲ ಮೂಡಿಸಿದ ಪ್ರಿಯಾಂಕಾ ಚತುರ್ವೇದಿ ಟ್ವೀಟ್
ಈ ಕುರಿತು ಹೈಕೋರ್ಟ್ 'ಅವರ ಬಳಿ ಕೇಳಲು ಸಾಕಷ್ಟು ವಿಷಯಗಳಿವೆ. ಆದ್ದರಿಂದ ಈ ಅರ್ಜಿಯ ಬಗ್ಗೆ ಆರಂಭಿಕ ದಿನಾಂಕವನ್ನು ನೀಡಲಾಗುವುದಿಲ್ಲ ಎಂದು ಹೇಳಿದರು. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು 26 ವಿರೋಧ ಪಕ್ಷಗಳಿಗೆ ಹಾಗೂ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ನೋಟಿಸ್ ಜಾರಿಗೊಳಿಸಿ ವಿರೋಧ ಪಕ್ಷಗಳು ತಮ್ಮ ಮೈತ್ರಿಗಾಗಿ ಇಂಡಿಯಾ ಹೆಸರನ್ನು ಬಳಸಿಕೊಳ್ಳುವುದನ್ನು ತಡೆಯುವಂತೆ ಸೂಚಿಸಿದರು.
ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರಕ್ಕಾಗಿ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ನಾಮಕಾರಣ ಮಾಡಲಾಗಿತ್ತು. ಇದಾದ ನಂತರ ಹಲವು ಪಕ್ಷಗಳು ಈ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇನ್ನು ಮುಂದಿನ ತಂತ್ರಗಾರಿಕೆಗಾಗಿ ವಿರೋಧ ಪಕ್ಷಗಳು ಮುಂಬೈನಲ್ಲಿ ಸಭೆ ನಡೆಸಲಿವೆ.
ಇದನ್ನೂ ಓದಿ: Oppositions party's meet: ವಿಪಕ್ಷಗಳ ಮಹತ್ವದ ಸಭೆ ಮುಕ್ತಾಯ.. 26 ಪಕ್ಷಗಳ 40 ನಾಯಕರಿಂದ ಒಗ್ಗಟ್ಟು ಪ್ರದರ್ಶನ