ಪಾಟ್ನಾ(ಬಿಹಾರ): 2024ರ ಚುನಾವಣೆಗೆ ಮುನ್ನ ವಿರೋಧ ಪಕ್ಷದ ಸದಸ್ಯರ ನಡುವೆ ಒಗ್ಗಟ್ಟು ಮೂಡಿಸುವ ಪ್ರಯತ್ನವಾಗಿ ಬಿಜೆಪಿಯೇತರ ಪಕ್ಷಗಳ ಪ್ರಮುಖ ನಾಯಕರು ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಹಾರದ ಆಡಳಿತ ಪಕ್ಷ ಹಾಗೂ ಸಂಯುಕ್ತ ಜನತಾ ದಳದ ಮುಖ್ಯಸ್ಥ ಲಾಲನ್ ಸಿಂಗ್ ಬುಧವಾರ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸಿಂಗ್, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ.
"ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ. ಇದಕ್ಕೆ ಎಲ್ಲ ವಿರೋಧ ಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಪಿಐನ ಡಿ ರಾಜಾ, ಸೀತಾರಾಮ್ ಯೆಚೂರಿ ಮತ್ತು ದೀಪಂಕರ್ ಭಟ್ಟಾಚಾರ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ‘‘ ಎಂದು ಲಾಲನ್ ಸಿಂಗ್ ಇದೇ ವೇಳೆ ಸ್ಪಷ್ಟಪಡಿಸಿದರು.
"ನಾವು ಜೂನ್ 12 ರಂದು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರ ಸಭೆ ಕರೆದಿದ್ದೇವೆ. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದ ಹಲವಾರು ಮುಖ್ಯಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ಇತರ ನಾಯಕರು ಪಾಟ್ನಾದಲ್ಲಿ ಸಭೆಗೆ ಹಾಜರಾಗಲು ಆಗುವುದಿಲ್ಲ ಎಂಬ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ, ಪ್ರತಿ ಪಕ್ಷದ ಸದಸ್ಯರ ಸಭೆ ಪಾಟ್ನಾದಲ್ಲಿ ಜೂನ್ 23 ರಂದು ನಿಗದಿಯಾದ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿವೆ ಎಂದು ಸಿಂಗ್ ಹೇಳಿದ್ದಾರೆ.
2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗೂಡಿಸುವ ಭಾಗವಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಎಲ್ಲ ಎನ್ಡಿಎ ಏತರ ಇತರ ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಸಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಜತೆ ನಿತೀಶ್ ಕುಮಾರ್ ಪ್ರತಿಪಕ್ಷಗಳ ಒಗ್ಗಟ್ಟಿನ ಹೋರಾಟದ ಬಗ್ಗೆ ಸಮಾಲೋಚಿಸಿದ್ದರು.
ದೇಶಾದ್ಯಂತ ಪ್ರತಿಪಕ್ಷಗಳನ್ನ ಒಗ್ಗೂಡಿಸಿ, ಬಿಜೆಪಿ ವಿರುದ್ಧ ಪ್ರಬಲ ಹೋರಾಟ ರೂಪಿಸಲು ನಿತೀಶ್ ಕುಮಾರ್ ಮುಂದಾಗಿದ್ದಾರೆ. ಇದು ರಾಷ್ಟ್ರರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ 12 ರಂದು ಎಲ್ಲ ಪ್ರತಿಪಕ್ಷಗಳ ನಾಯಕರು ಪಾಟ್ನಾದಲ್ಲಿ ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಾಹುಲ್ ಗಾಂಧಿ ವಿದೇಶಿ ಪ್ರವಾಸದಲ್ಲಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅನ್ಯ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲ್ಲ ಎಂದು ಹೇಳಿದ್ದರು ಎಂದು ವರದಿಯಾಗಿತ್ತು. ಇನ್ನು ಮಮತಾ ಬ್ಯಾನರ್ಜಿ ಆ ಸಭೆಗೆ ತಮ್ಮ ಪ್ರತಿನಿಧಿ ಕಳುಹಿಸುವುದಾಗಿ ಹೇಳಿದ್ದರು. ಇನ್ನು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ರಾಜ್ಯದಲ್ಲಿ ಬಿಡುವಿಲ್ಲದ ಕಾರ್ಯಕ್ರಮದ ಹಿನ್ನೆಲೆ ಸಭೆಗೆ ಬರುವುದಿಲ್ಲ ಎಂದಿದ್ದರು ಎಂದು ವರದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 12 ರ ಸಭೆ ರದ್ದುಗೊಂಡಿತ್ತು.
ಇದನ್ನು ಓದಿ:ಮೋದಿ ಪದವಿ ವಿವಾದ: ಜು.13ರಂದು ಕೋರ್ಟ್‌ಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಸಮನ್ಸ್