ನವದೆಹಲಿ: ಸಂಸತ್ತಿನಲ್ಲಿ ಗೊಂದಲ ಮತ್ತು ಗಲಾಟೆಯನ್ನು ಸೃಷ್ಟಿಸುವುದೇ ವಿಪಕ್ಷಗಳ ಕೆಲಸ ಎಂದು ಮಹಾರಾಷ್ಟ್ರದ ಪಕ್ಷೇತರ ಸಂಸದ ನವನೀತ್ ರಾಣಾ ಆಕ್ಷೇಪ ವ್ಯಕ್ತಪಡಿಸಿದ್ದು, ರಾಷ್ಟ್ರದ ಹಲವು ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರಬೇಕಾದರೆ ವಿರೋಧ ಪಕ್ಷಗಳು ಸರ್ಕಾರಿ ಹಣದಲ್ಲಿ ಗಲಾಟೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿರುವ ಎಲ್ಲಾ ಸಂಸದರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಬಯಸುತ್ತಾರೆ. ಆದರೆ, ಪ್ರತಿಪಕ್ಷಗಳ ಗದ್ದಲದಿಂದಾಗಿ, ಸಂಸದರಿಗೆ ತಮ್ಮ ವಿಷಯವನ್ನು ಪ್ರಸ್ತಾಪಿಸುವ ಅವಕಾಶ ಸಿಗುವುದಿಲ್ಲ. ವಿರೋಧ ಪಕ್ಷಗಳು ಸಂಸತ್ತಿನ ಹಣವನ್ನು ವ್ಯರ್ಥ ಮಾಡುತ್ತಿವೆ. ಇದನ್ನೆಲ್ಲಾ ಜನರು ನೋಡುತ್ತಿದ್ದಾರೆ ಎಂದರು.
ಪ್ರವಾಹ, ಕೋವಿಡ್ಗೆ ಸಂಬಂಧಿಸಿದ ಮಸೂದೆಗಳ ಚರ್ಚೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂತಾದ ಹಲವು ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕಾಗಿದೆ ಎಂದು ನವನೀತ್ ರಾಣಾ ಹೇಳಿದ್ದು, ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ.
ಪೆಗಾಸಸ್ ವಿಚಾರವಾಗಿ ಮಾತನಾಡುತ್ತಾ, ಈ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಗಲಾಟೆ ಮುಂದುವರಿದರೆ ಯಾವುದೇ ಪರಿಹಾರ ಸಿಗುವುದಿಲ್ಲ. ಎಲ್ಲಾ ಪಕ್ಷಗಳು ಒಗ್ಗೂಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹಾಕಿ ತಂಡದ ಮಹಿಳಾ ಆಟಗಾರ್ತಿಯರಿಗೆ ಶುಭ ಹಾರೈಸಿದ ಸಂಸದೆ, ಒಲಿಂಪಿಕ್ಸ್‌ನಲ್ಲಿ ಮಹಿಳೆಯರು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಇದು ದೇಶಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಬಹುದು ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Pegasus Snooping row: ಸುಪ್ರೀಂಕೋರ್ಟ್ನಲ್ಲಿ ಇಂದು ಅರ್ಜಿಗಳ ವಿಚಾರಣೆ