ಪಾಟ್ನಾ(ಬಿಹಾರ) : ಸಿಎಂ ನಿತೀಶ್ ಕುಮಾರ್ ಅವರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಪೊಲೀಸ್ ಮಸೂದೆಯ ವಿರುದ್ಧ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೊಸ ಮಸೂದೆ ಬಂಧನ ಮತ್ತಿತರ ವಿಚಾರದಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡುತ್ತದೆ ಎಂದು ಆರೋಪಿಸಿದ್ದಾರೆ.
ಕಲಾಪ ಆರಂಭವಾಗಿ ಪೊಲೀಸ್ ಮಸೂದೆಯ ಮೇಲೆ ವಿಚಾರಣೆ ಆರಂಭವಾದಾಗ ಆರ್‌ಜೆಡಿ, ಸಿಪಿಐ-ಎಂಎಲ್ ಮತ್ತು ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಿ ಮತ್ತು ಘೋಷಣೆಗಳನ್ನು ಪ್ರಾರಂಭಿಸಿದರು.
ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ವಿರೋಧ ಪಕ್ಷದ ಸದಸ್ಯರಿಗೆ ಹಿಂತಿರುಗಿ ತಮ್ಮ ಸ್ಥಳಗಳಿಂದ ಮಾತನಾಡಲು ಒತ್ತಾಯಿಸಿದರೂ, ಕೋಲಾಹಲ ಮುಂದುವರೆದಿತ್ತು. ಇದರಿಂದಾಗಿ ಸದನವನ್ನು ಮುಂದೂಡಲಾಯಿತು.
ಇದನ್ನೂ ಓದಿ: ಏಮ್ಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸೋಮನಾಥ ಭಾರತಿಗೆ 2 ವರ್ಷ ಜೈಲು ಶಿಕ್ಷೆ
ನಂತರ 12 ಗಂಟೆಗೆ ಕಲಾಪ ಪುನಾರಂಭಗೊಂಡಾಗ, ಪ್ರತಿಪಕ್ಷದ ಸದಸ್ಯರು ಮತ್ತೆ ಗಲಾಟೆ ಮಾಡಿದರು. ಮಸೂದೆಯ ಪ್ರತಿ ಹರಿದು ಹಾಕಿದರು ಮತ್ತು ಸದನದ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಬೇಕಾಯಿತು.
ಮಧ್ಯಾಹ್ನದ ಊಟದ ನಂತರ ಸದನ ಮತ್ತೆ ಆರಂಭವಾದ ಮೇಲೆ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಪೊಲೀಸ್ ಕಾಯ್ದೆಯನ್ನು ಕಪ್ಪು ಕಾಯ್ದೆ ಎಂದು ಜರಿದಿದ್ದಾರೆ. ಇದರ ಜೊತೆಗೆ ಸರ್ಕಾರ ಸರ್ವಾಧಿಕಾರಿ ಮನೋಭಾವ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಕಾಯ್ದೆಯು ಬಂಧನ ಮತ್ತು ಕಸ್ಟಡಿ ಸಾವು ವಿಚಾರಗಳಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡುತ್ತದೆ ಎಂಬ ಆರೋಪವಿದೆ. ಪ್ರತಿಪಕ್ಷಗಳು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿವೆ.