ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದ ನಂತರ ಸುಮಾರು 20,000 ಭಾರತೀಯರು ವಿವಿಧ ಗಡಿಗಳ ಮೂಲಕ ಯುದ್ಧಪೀಡಿತ ಉಕ್ರೇನ್ ತೊರೆದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಜನವರಿ ಕೊನೆಯ ವಾರದಲ್ಲಿ ಭಾರತವು ಸಲಹೆ ನೀಡಿದ ನಂತರ ಅಂದಿನಿಂದ 20,000 ಭಾರತೀಯ ನಾಗರಿಕರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ. ಇನ್ನೂ ಹೆಚ್ಚಿನ ಜನರು ಅಲ್ಲಿ ಸಿಕ್ಕಿಬಿದ್ದಿದ್ದಾರೆ. 'ಆಪರೇಷನ್ ಗಂಗಾ' ಅಡಿ ಭಾರತೀಯ ವಾಯುಪಡೆಯ ಸಿ -17 ವಿಮಾನಗಳು ಸೇರಿದಂತೆ 16 ವಿಮಾನಗಳು ನಿಗದಿಯಾಗಿವೆ. ಇವೆಲ್ಲ ಮುಂದಿನ 24 ಗಂಟೆಗಳಲ್ಲಿ ಕಾರ್ಯಾಚರಣೆ ಮಾಡಲಿವೆ. ನಾವು ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಉಕ್ರೇನ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಉಕ್ರೇನ್‌ನಲ್ಲಿ ರಷ್ಯಾ ದಾಳಿಯಲ್ಲಿ ಗಾಯಗೊಂಡಿರುವ ಹರ್ಜೋತ್ ಸಿಂಗ್ ಅವರ ಚಿಕಿತ್ಸೆಯ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ. ಉಕ್ರೇನ್ನಿಂದ ಭಾರತದ ಕೊನೆಯ ವ್ಯಕ್ತಿ ಸ್ಥಳಾಂತರವಾಗುವವರೆಗೂ ಭಾರತ ಸರ್ಕಾರ 'ಆಪರೇಷನ್ ಗಂಗಾ' ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಭಾರತೀಯರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ: ರಷ್ಯಾ ಆರೋಪ
ನಮ್ಮ ಗಮನ ಪೂರ್ವ ಉಕ್ರೇನ್ ಮೇಲಿದೆ, ಅದರಲ್ಲೂ ವಿಶೇಷವಾಗಿ ಖಾರ್ಕಿವ್ ಮತ್ತು ಪಿಸೋಚಿನ್ ಮೇಲೆ ಇದೆ. ಅಲ್ಲಿಂದ ಕೆಲ ಬಸ್‌ಗಳಲ್ಲಿ ಭಾರತೀಯ ಪ್ರಜೆಗಳನ್ನು ಕರೆತರಲು ಸಾಧ್ಯವಾಯಿತು. ಸುಮಾರು 900 -1,000 ಭಾರತೀಯರು ಪಿಸೋಚಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು 700 ಕ್ಕೂ ಹೆಚ್ಚು ಭಾರತೀಯರು ಸುಮಿ ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದರು.
ಸುಮಿ ನಗರದಲ್ಲಿ ಸಿಲುಕಿರುವವರ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದೇಶಾಂಗ ಸಚಿವಾಲಯದ ವಕ್ತಾರರು, ಸುಮಿಯಲ್ಲಿ ಕದನ ವಿರಾಮವಿಲ್ಲದೇ ಯುದ್ಧ ನಡೆಯುತ್ತಿರುವುದರಿಂದ ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸುವುದು ಭಾರಿ ಕಷ್ಟವಾಗಿದೆ. ನಮ್ಮ ಜನ ಮತ್ತು ವಿದ್ಯಾರ್ಥಿಗಳು ಸ್ಥಳಾಂತರಿಸಲು ಕೆಲ ಸಮಯಾವಕಾಶ ನೀಡಬೇಕಾಗಿದೆ. ಕದನ ವಿರಾಮ ಘೋಷಿಸುವಂತೆ ಉಕ್ರೇನ್ ಮತ್ತು ರಷ್ಯಾಕ್ಕೆ ಒತ್ತಾಯಿಸುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ.