ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಮಂಗಳವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವೇಳೆ ದಟ್ಟ ಅರಣ್ಯದ ಒಳಗೆ ತಪ್ಪಿಸಿಕೊಂಡ ಉಳಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ನಡೆಸಿದ ಶೋಧ ಕಾರ್ಯಾ ಮುಂದುವರೆಸಿದೆ.
ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಕೇಶ್ ಸಿಂಗ್ ಅವರು ನಿರ್ದಿಷ್ಟ ಮಾಹಿತಿ ಮೇರೆಗೆ ಸೇನೆ ಮತ್ತು ಎಸ್‌ಒಜಿ ಜಂಟಿ ತಂಡವು ರಜೌರಿಯ ನಾರ್ಲಾ ಗ್ರಾಮದಲ್ಲಿ ಪ್ರದೇಶವನ್ನು ಸುತ್ತುವರೆದಿದ್ದರು. ಶೋಧ ಕಾರ್ಯಾ ನಡೆಯುತ್ತಿರುವುದು ತಿಳಿದ ಭಯೋತ್ಪಾದಕರು ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ, ತಂಡವೂ ಸಹ ಪ್ರತಿದಾಳಿ ಮಾಡಿದ್ದು, ಒಬ್ಬ ಭಯೋತ್ಪಾದಕನನ್ನು ಎನ್ಕೌಂಟರ್ ಮಾಡಿ ಹೊಡೆದುರುಳಿಸಲಾಗಿದೆ.
ಭದ್ರತಾ ಪಡೆಗಳು ನಿನ್ನೆ(ಸೋಮವಾರ) ಸಂಜೆ ಅರಣ್ಯ ಪ್ರದೇಶದಲ್ಲಿ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆ ಪ್ರಾರಂಭಿಸಿದವು. ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ನಂತರ ಗುಂಡು ಹಾರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಶಬ್ಧ ಕೇಳಿ ದಟ್ಟವಾದ ಅರಣ್ಯದಲ್ಲಿ ಇಬ್ಬರೂ ಶಂಕಿತರು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಅವರ ಕೆಲವು ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡ ಭಯೋತ್ಪಾದಕರು ಅರಣ್ಯದ ಒಳಗೇ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಪತ್ತೆಹಚ್ಚಲು ಬಾಂಬೆಲ್ ಮತ್ತು ನಾರ್ಲಾ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಉಗ್ರರು ಅಡಗಿರುವ ಸ್ಥಳದ ಹುಡುಕಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ಮಿ ಶ್ವಾನವೊಂದು ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದೆ. ಸೇನಾ ಶ್ವಾನ ಕೆಂಟ್ ಕಾರ್ಯಾಚರಣೆಯಲ್ಲಿ ಮುಂಚೂಣಿತ್ತು ಎಂದು ಜಮ್ಮುವಿನ ರಕ್ಷಣಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ.
"ಕೆಂಟ್ ಶ್ವಾನ ಭಯೋತ್ಪಾದಕರ ಜಾಡು ಹಿಡಿಯುವ ಸೈನಿಕರ ಕಾರ್ಯಾಚರಣೆಯನ್ನು ಯಾವಾಗಲೂ ಮುಂಚೂಣಿಯಲ್ಲಿತ್ತು. ಈ ಬಾರಿ ನಡೆದ ಗುಂಡಿನ ಚಕಮಕಿಯಲ್ಲಿ ಕೆಂಟ್ ಗಂಭೀರ ಗಾಯಗೊಂಡು ಸಾವನ್ನಪ್ಪಿದೆ. ತನ್ನ ನಿರ್ವಾಹಕನನ್ನು ರಕ್ಷಿಸುವಾಗ ತನ್ನ ಸ್ವಂತ ಜೀವ ಅರ್ಪಿಸಿತು. ಈ ಶ್ವಾನ 21 ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ಆಗಿತ್ತು" ಎಂದು ಲೆಫ್ಟಿನೆಂಟ್ ಕರ್ನಲ್ ಬಾರ್ಟ್ವಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಹೊಂಚು ಹಾಕಿ ಮೂವರು ಆದಿವಾಸಿಗಳ ಹತ್ಯೆ