ಮಹಾರಾಷ್ಟ್ರ(ಪುಣೆ): ಕಬಡ್ಡಿ ಅಭ್ಯಾಸಕ್ಕೆ ಹೋಗುತ್ತಿದ್ದ 14 ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಮೂರು ಮಂದಿ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ಸಂಜೆ ಪುಣೆ ನಗರದ ಬೀದಿಯಲ್ಲಿ ನಡೆದಿದೆ.
8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಸಂಜೆ 5.45ರ ಸುಮಾರಿಗೆ ಬಿಬೇವಾಡಿ ಪ್ರದೇಶದ ಯಶ್ ಲಾನ್ಸ್‌ನಲ್ಲಿ ಕಬಡ್ಡಿ ಅಭ್ಯಾಸ ಮಾಡಲು ತೆರಳುತ್ತಿದ್ದಳು. ಈ ವೇಳೆ 2 ಮೋಟಾರು ಬೈಕ್ನಲ್ಲಿ ಬಂದ ಮೂವರು ಆಕೆಯ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಬಿಬೇವಾಡಿ ಪೊಲೀಸ್ ಠಾಣೆ ಹಿರಿಯ ಇನ್ಸ್‌ಪೆಕ್ಟರ್ ಸುನಿಲ್ ಜವರೇ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಪ್ರಕರಣದ ಮುಖ್ಯ ಆರೋಪಿ ರಿಷಿಕೇಶ್ ಭಾಗವತ್ (22)ನನ್ನು ಬಂಧಿಸಿದ್ದೇವೆ. ರಿಷಿಕೇಶ್ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನು ಬಾಲಕಿ ಹಾಗೂ ಆಕೆಯ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪುಣೆ ವಲಯ ಡಿಸಿಪಿ ನಮ್ರತಾ ಪಾಟೀಲ್ ಹೇಳಿದರು.