ಹೈದರಾಬಾದ್: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ತಳಿ 'ಓಮಿಕ್ರೋನ್' ಇದೀಗ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಆತಂಕ ಹುಟ್ಟಿಸಿದೆ. ಈಗಾಗಲೇ ಕೆಲವು ದೇಶಗಳಲ್ಲಿ ಹೊಸ ಮಹಾಮಾರಿ ಕಾಣಿಸಿಕೊಳ್ಳುತ್ತಿದ್ದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಹೊಸ ಸೋಂಕಿನ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಪ್ರತಿದಿನ ಅತಿ ಹೆಚ್ಚಿನ ದೇಶಗಳಲ್ಲಿ ಓಮಿಕ್ರೋನ್ ಪ್ರಕರಣ ಪತ್ತೆಯಾಗ್ತಿದ್ದು, ಸರ್ಕಾರಗಳು ಸೇರಿದಂತೆ ಇಡೀ ವಿಶ್ವ ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೆಲವು ದೇಶಗಳು ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಈಗಾಗಲೇ ಸಂಪೂರ್ಣ ನಿಷೇಧ ಹೇರಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಪ್ರತಿಕ್ರಿಯಿಸಿ, ಈ ರೂಪಾಂತರಿ ಹಿಂದಿನ ಸೋಂಕಿಗಿಂತಲೂ ಹೆಚ್ಚು ಅಪಾಯಕಾರಿ. ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀಳುವ ಸಾಧ್ಯತೆಯೂ ಇದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಮಾತನಾಡಿದ್ದು, 'ಕೋವಿಡ್ ರೂಪಾಂತರಿ ತಳಿ ಓಮಿಕ್ರೋನ್ ಹರಡುವಿಕೆ ಸಾಮರ್ಥ್ಯದ ಬಗ್ಗೆ ಹೆಚ್ಚಿನ ನಿಖರತೆ ಇಲ್ಲ. ಆದರೆ, ಅದು ಅತಿ ಹೆಚ್ಚು ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ವಿಶ್ವ ಸನ್ನದ್ಧಗೊಳ್ಳಬೇಕು' ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವದ ಕೊಲೆ.. 12 ಸಂಸದರ ಅಮಾನತಿಗೆ ವಿಪಕ್ಷಗಳ ಆಕ್ರೋಶ, ನಾಳೆ ಸಭೆಗೆ ನಿರ್ಧಾರ..
ರೂಪಾಂತರಿ ಡೆಲ್ಟಾದಿಂದಲೂ ಅಪಾಯಕಾರಿ:
ಓಮಿಕ್ರೋನ್ ರೂಪಾಂತರಿ ವ್ಯಕ್ತಿ ಪ್ರತಿರಕ್ಷಣಾ ಸಾಮರ್ಥ್ಯದಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಡೆಲ್ಟಾದಿಂದಲೂ ಅತಿ ಹೆಚ್ಚು ವೇಗವಾಗಿ ಹರಬಡಲ್ಲುದು. ಜಾಗತಿಕ ಮಟ್ಟದಲ್ಲಿ ಹೆಚ್ಚು ಹರಡುವ ಸಂಭವನೀಯತೆ ಇದೆ. ಹಾಗಾಗಿ, ತೀವ್ರ ಪರಿಣಾಮ ಉಂಟಾಗಬಹುದು ಎಂದು ಮುನ್ಸೂಚನೆ ಕೊಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮುನ್ನೆಚ್ಚರಿಕೆ ಕ್ರಮಗಳೇನು?:
- ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಸಾಮೂಹಿಕ ಸಭೆ-ಸಮಾರಂಭಗಳಲ್ಲಿ ಭಾಗಿಯಾಗದಿರುವುದು.
- ಸಾರ್ವಜನಿಕ ಆರೋಗ್ಯ ಮತ್ತು ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ.
- ಮೇಲಿಂದ ಮೇಲೆ ಆರೋಗ್ಯ ತಪಾಸಣೆ, ಸಂಭಾವ್ಯ ಲಕ್ಷಣ ಕಾಣಿಸಿಕೊಂಡಾಗ ಆಸ್ಪತ್ರೆಗೆ ಭೇಟಿ.
- ಆರೋಗ್ಯ ಸಿಬ್ಬಂದಿ ಓಮಿಕ್ರೋನ್ ಬಗ್ಗೆ ಮಾಹಿತಿ ನೀಡುವುದು.
- ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಅರಿವು ಮೂಡಿಸುವುದು.
ದೆಹಲಿ ಏಮ್ಸ್ ಮುಖ್ಯಸ್ಥರು ಹೇಳಿದ್ದೇನು?
ದೆಹಲಿ ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಮಾತನಾಡಿ, 'ಹೆಚ್ಚು ಆತಂಕ ಮೂಡಿಸಿರುವ ಓಮಿಕ್ರೋನ್ ವೈರಸ್ ಸುಮಾರು 30ಕ್ಕೂ ರೂಪಾಂತರಿಗಳನ್ನು ಹೊಂದಿದೆ. ಅದರ ಪ್ರೊಟೀನ್ ಕವಚ ಮನುಷ್ಯರ ರೋಗ ನಿರೋಧಕ ಶಕ್ತಿಯಿಂದ ಪಾರಾಗುವಂತೆ ಮಾಡುತ್ತದೆ. ಇದರಿಂದಾಗಿ ಕೋವಿಡ್ ವ್ಯಾಕ್ಸಿನ್ ತನ್ನ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡಿವಾಣ ಹಾಕುವುದರ ಜೊತೆಗೆ, ಕೋವಿಡ್ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು' ಎಂದು ಅವರು ಸಲಹೆ ನೀಡಿದ್ದಾರೆ.