ಜಾರ್ಖಂಡ್ : ಭಾರತೀಯ ಮಹಿಳಾ ಹಾಕಿ ಆಟಗಾರ್ತಿ ಸಲೀಮಾ ಟೆಟೆ ಅವರನ್ನು ಏಷ್ಯನ್ ಹಾಕಿ ಫೆಡೆರೇಶನ್ನ ಅಥ್ಲೆಟಿಕ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಕೊರಿಯಾದ ಮುಂಗ್‌ಯೊಂಗ್ ನಗರದಲ್ಲಿ ನಡೆದ ಏಷ್ಯನ್ ಹಾಕಿ ಫೆಡರೇಶನ್ ಸಮ್ಮೇಳನದಲ್ಲಿ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಎರಡು ವರ್ಷಗಳ ಕಾಲ ಇವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ವೇಳೆ ಸಲಿಮಾ ಅವರಿಗೆ ಏಷ್ಯನ್ ಹಾಕಿ ಫೆಡೆರೇಶನ್ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಸಲೀಮಾ ಅವರು ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದವರು. ಈಗಲೂ ಅವರು ಸಣ್ಣ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಸುಲಕ್ಷಣ ಟೆಟೆ ಅವರೂ ಸ್ಥಳೀಯ ಮಟ್ಟದ ಹಾಕಿ ಆಟಗಾರರಾಗಿದ್ದಾರೆ. ಇನ್ನು ಸಲಿಮಾ ಅವರು ತಮ್ಮ ಗ್ರಾಮದಲ್ಲಿ ಹಾಕಿ ಆಟ ಆಡಲು ಆರಂಭಿಸಿದಾಗ ಇವರಿಗೆ ಹಾಕಿ ಆಡಲು ಹಾಕಿ ಸ್ಟಿಕ್ ಕೂಡ ಇರಲಿಲ್ಲ. ಈ ಸಂದರ್ಭಗಳಲ್ಲಿ ಇವರು ಬಿದಿರಿನಿಂದ ಮಾಡಿದ ಹಾಕಿ ಸ್ಟಿಕ್ಗಳನ್ನು ಬಳಸಿ ಹಾಕಿ ಆಡುತ್ತಿದ್ದರು.
ನವೆಂಬರ್ 2013ರಲ್ಲಿ ಸಲೀಮಾ ಅವರು ಸಿಮ್ಡೆಗಾದ ರೆಸಿಡೆನ್ಸಿಯಲ್ ಹಾಕಿ ಸೆಂಟರ್ನಿಂದ ಜಾರ್ಖಂಡ್ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ನ್ಯಾಷನಲ್ ಸ್ಕೂಲ್ ಹಾಕಿ ಟೂರ್ನ್ಮೆಂಟ್ಗೂ ಆಯ್ಕೆ ಆದರು. ಬಳಿಕ 2016ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಆಟ ಪ್ರಾರಂಭಿಸಿದ ಅವರು, ಇದೇ ವರ್ಷ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದರು. ಇದಾದ ಬಳಿಕ ಅವರು ಟೋಕಿಯೊ ಒಲಿಂಪಿಕ್ಸ್, ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ದೇಶಕ್ಕಾಗಿ ಆಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಲೀಮಾ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯ ಆಡುತ್ತಿತ್ತು. ಈ ಸಂದರ್ಭ ಸಲೀಮಾ ಟೆಟೆ ಅವರ ಮನೆಯಲ್ಲಿ ಹಾಕಿ ಪಂದ್ಯಾಟವನ್ನು ನೋಡಲು ಟಿವಿ ಇರಲಿಲ್ಲ. ಈ ಬಗ್ಗೆ ತಿಳಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಕ್ಷಣ ಅವರ ಮನೆಗೆ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಒದಗಿಸಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು.
ಇನ್ನು, ಸಲೀಮಾ ಅವರ ಹಾಕಿ ಕನಸುಗಳನ್ನು ನನಸು ಮಾಡಲು, ಅವರ ಅಕ್ಕ ಅನಿಮಾ ಇತರರ ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡಿದ್ದಾರೆ. ಅನಿಮಾ ಸ್ವತಃ ಉತ್ತಮ ಹಾಕಿ ಆಟಗಾರ್ತಿಯಾಗಿದ್ದು, ಆದರೆ ಸಹೋದರಿಯರಿಗಾಗಿ ಹಣವನ್ನು ಸಂಗ್ರಹಿಸಲು ಹಾಕಿಯನ್ನು ತ್ಯಾಗ ಮಾಡಿದರು. ಜೊತೆಗೆ ಸಲೀಮಾ ಅವರ ಸಹೋದರಿ ಮಹಿಮಾ ಟೆಟೆ ಕೂಡ ಜಾರ್ಖಂಡ್‌ನ ಜೂನಿಯರ್ ಮಹಿಳಾ ಹಾಕಿ ತಂಡದ ಆಟಗಾರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲೀಮಾ ಟೆಟೆ, " ಏಷ್ಯನ್ ಹಾಕಿ ಫೆಡೆರೇಷನ್ ಅಥ್ಲೀಟ್ ರಾಯಭಾರಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿರುವುದು ನನಗೆ ಗೌರವ ತಂದಿದೆ. ಏಷ್ಯಾದ ಕ್ರೀಡಾಪಟುಗಳಾಗಿ ನಾವು ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತೇವೆ. ಈ ಸ್ಥಾನವು ಇಂತವರ ಧ್ವನಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ನನ್ನ ಮೇಲೆ ನಂಬಿಕೆ ಇಟ್ಟು ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಏಷ್ಯನ್ ಹಾಕಿ ಫೆಡರೇಶನ್‌ಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ತಿಳಿಸುತ್ತೇನೆ. ಜೊತೆಗೆ ಹಾಕಿ ಇಂಡಿಯಾಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ಸಲಿಮಾ ಟೆಟೆ ಅವರು ರಾಯಭಾರಿಯಾಗಿ ಆಯ್ಕೆ ಆಗಿರುವುದಕ್ಕೆ ಹಾಕಿ ಇಂಡಿಯಾದ ಅಧ್ಯಕ್ಷ ಪದ್ಮಶ್ರೀ ಡಾ. ದಿಲೀಪ್ ಟಿರ್ಕಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರಕಟ ; ನೀರಜ್ ಚೋಪ್ರಾ ಸೇರಿ 11 ಕ್ರೀಡಾಪಟುಗಳ ಹೆಸರು ಘೋಷಣೆ