ನವದೆಹಲಿ: ಒಡಿಶಾದಲ್ಲಿ ಶುಕ್ರವಾರ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್ - ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 233 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಸುಮಾರು 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ವಾತಂತ್ರ್ಯದ ನಂತರ ಇಂತಹ ಮಾರಣಾಂತಿಕ ಅಪಘಾತಗಳಲ್ಲಿ ಇದು ಒಂದಾಗಿದೆ. ಅಂತಹ ಇತರ ಮಾರಣಾಂತಿಕ ರೈಲು ಅಪಘಾತಗಳ ನೋಟ ಇಲ್ಲಿದೆ..
* ಜೂನ್ 6, 1981 ರಂದು ಭಾರತವು ಬಿಹಾರದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತದಲ್ಲಿ ಒಂದು. ಸೇತುವೆ ದಾಟುವಾಗ ರೈಲೊಂದು ಬಗ್ಮತಿ ನದಿಗೆ ಬಿದ್ದು 750ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
* ಆಗಸ್ಟ್ 20, 1995 ರಂದು, ಪುರುಷೋತ್ತಮ್ ಎಕ್ಸ್‌ಪ್ರೆಸ್ ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿತ್ತು. ಅಧಿಕೃತ ಸಾವಿನ ಸಂಖ್ಯೆ ಸುಮಾರು 305 ಆಗಿತ್ತು.
* 26 ನವೆಂಬರ್ 1998 ರಂದು, ಪಂಜಾಬ್‌ನ ಖನ್ನಾದಲ್ಲಿ ಜಮ್ಮು ತಾವಿಸೀಲ್ದಾಹ್ ಎಕ್ಸ್‌ಪ್ರೆಸ್ ರೈಲು ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಮೇಲ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿತ್ತು. ಆಗ ಮೂರು ಕೋಚ್‌ಗಳು ನಜ್ಜುಗುಜ್ಜಾಗಿ ಸುಮಾರು 212 ಜನರು ಸಾವನ್ನಪ್ಪಿದ್ದರು.
* ಆಗಸ್ಟ್ 2, 1999ರಲ್ಲಿ ಉತ್ತರ ಫ್ರಾಂಟಿಯರ್ ರೈಲ್ವೆಯ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್ ಅವಧ್ ಅಸ್ಸೋಂ ಎಕ್ಸ್‌ಪ್ರೆಸ್‌ಗೆ ಗೈಸಲ್ ರೈಲು ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಆಗ 285 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಾಯಗೊಂಡರು. ಬಲಿಯಾದವರಲ್ಲಿ ಹಲವರು ಸೇನೆ, BSF ಅಥವಾ CRPF ಸಿಬ್ಬಂದಿಯೂ ಸೇರಿದ್ದರು.
* ನವೆಂಬರ್ 20, 2016ರಲ್ಲಿ ಕಾನ್ಪುರದಿಂದ ಸರಿಸುಮಾರು 60 ಕಿಮೀ ದೂರದಲ್ಲಿರುವ ಪುಖ್ರಾಯನ್‌ನಲ್ಲಿ ಇಂದೋರ್ ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿತಪ್ಪಿದಾಗ 152 ಜನರು ಸಾವನ್ನಪ್ಪಿದ್ದರು ಮತ್ತು 260 ಮಂದಿ ಗಾಯಗೊಂಡಿದ್ದರು.
* ಸೆಪ್ಟೆಂಬರ್ 9, 2002ರಲ್ಲಿ ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರಫಿಗಂಜ್‌ನ ಧಾವೆ ನದಿಯ ಸೇತುವೆಯ ಮೇಲೆ ಹಳಿತಪ್ಪಿ 140 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಈ ಘಟನೆಗೆ ಭಯೋತ್ಪಾದಕರ ವಿಧ್ವಂಸಕ ಕೃತ್ಯವೆಸಗಲಾಗಿದೆ ಎನ್ನಲಾಗಿತ್ತು.
* ಡಿಸೆಂಬರ್ 23, 1964ರಲ್ಲಿ ರಾಮೇಶ್ವರಂ ಚಂಡಮಾರುತದಿಂದ ಪಂಬನ್ ಧನುಷ್ಕೋಡಿ ಪ್ಯಾಸೆಂಜರ್ ರೈಲು ಕೊಚ್ಚಿಹೋಗಿ ಅದರಲ್ಲಿದ್ದ 126 ಪ್ರಯಾಣಿಕರು ಸಾವನ್ನಪ್ಪಿದರು.
* ಮೇ 28, 2010ರಲ್ಲಿ ಮುಂಬೈಗೆ ತೆರಳುತ್ತಿದ್ದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಜಾರ್‌ಗ್ರಾಮ್ ಬಳಿ ಹಳಿತಪ್ಪಿ ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 148 ಪ್ರಯಾಣಿಕರ ಸಾವಿಗೆ ಕಾರಣವಾಯಿತು. ಹೀಗೆ ಸ್ವಾತಂತ್ರ್ಯ ನಂತರ ಹಲವಾರು ಭೀಕರ ಅಪಘಾತ ಸಂಭವಿಸಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 233ಕ್ಕೆ ಏರಿಕೆ, 900 ಮಂದಿಗೆ ಗಾಯ