ನುಹ್ (ಹರಿಯಾಣ): ಶೋಭಾಯಾತ್ರೆಯ ನಿಮಿತ್ತ ಬಿಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ವೊಬ್ಬರು ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಹಕೀಮುದ್ದೀನ್ ಮೃತಪಟ್ಟ ಸಬ್ ಇನ್‌ಸ್ಪೆಕ್ಟರ್. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಕೀಮುದ್ದೀನ್ ಅವರನ್ನು ರಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ತಂಡದೊಂದಿಗೆ ಬದ್ಕಲಿ ಚೌಕ್‌ನಲ್ಲಿ ಬಿಗಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ದಿಢೀರ್ ಹೃದಯಾಘಾತ ಕಾಣಿಸಿಕೊಂಡಿದ್ದರಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಹಕೀಮುದ್ದೀನ್ ಅವರು ಇತ್ತೀಚೆಗಷ್ಟೇ ನಗೀನಾ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಎಸ್ಹೆಚ್ಒ ಆಗಿ ನೇಮಕಗೊಂಡಿದ್ದರು.
ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು ಹರಿಯಾಣದ ನುಹ್‌ನಲ್ಲಿ ಜಲಾಭಿಷೇಕ ಶೋಭಾ ಯಾತ್ರೆ ನಡೆಯುತ್ತಿದೆ. ಈ ಯಾತ್ರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಹೇರಿ ಆದೇಶ ಕೂಡ ಹೊರಡಿಸಲಾಗಿದೆ. ಜೊತೆಗೆ ಇಂಟರ್ನೆಟ್ ಸೇವೆ ಕೂಡ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಪೊಲೀಸ್ ಪಡೆಗಳು ನಗರವನ್ನು ಸುತ್ತುವರೆದಿದ್ದರಿಂದ ಕೋಟೆಯಾಗಿ ಪರಿವರ್ತನೆಯಾಗಿದೆ. ಬಿಗಿ ಭದ್ರತೆಗಾಗಿ ನಗರದ ಎಲ್ಲ ಗಡಿಗಳನ್ನು ಮುಚ್ಚಲಾಗಿದೆ. ಒಟ್ಟು 675 ಅಧಿಕಾರಿಗಳು, ಹರಿಯಾಣ ಸಶಸ್ತ್ರ ಪೊಲೀಸ್‌ನ ಮೂರು ಬೆಟಾಲಿಯನ್‌ಗಳು ಮತ್ತು ಅರೆಸೇನಾ ಪಡೆಗಳ ಸೈನಿಕರು ನುಹ್ ನಗರದ ಪ್ರತಿಯೊಂದು ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
''ಮೆರವಣಿಗೆ ಸೇರಿದಂತೆ ಇತರೆ ಸಭೆ-ಸಮಾರಂಭಗಳನ್ನು ನಡೆಸಲು ಅವಕಾಶ ನೀಡಿಲ್ಲ. ಕೇವಲ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಇಂದು ಮುಂಜಾನೆ 4:30ರಿಂದ ಜಲಾಭಿಷೇಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತಿದೆ. ಹೊರ ಜಿಲ್ಲೆಯಿಂದ ಬರುವುದಕ್ಕೆ ಪ್ರವೇಶ ನಿಷೇಧ ಹೇರಲಾಗಿದೆ. ಗಡಿಗಳಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಜುಲೈ 31ರಂದು ನಡೆದಂತೆ ಯಾವುದೇ ಅಹಿತಕರ ಘಟನೆ ಮತ್ತೆ ಪುನರಾವರ್ತನೆಯಾಗಬಾರದು ಎಂಬ ಕಾರಣದಿಂದ ನಿಗಾ ಇಡಲಾಗಿದೆ'' ಎಂದು ಎಡಿಜಿ ಮಮತಾ ಸಿಂಗ್ ಮಾಹಿತಿ ನೀಡಿದ್ದಾರೆ.
''ನುಹ್ ಜಿಲ್ಲೆಯ ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದೆ. ಪ್ರತಿ ಬ್ಯಾರಿಕೇಡ್ನಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬರ ಮೇಲೂ ನಿಗಾ ಇಡಲಾಗುತ್ತಿದೆ. ಇದಲ್ಲದೇ ಪ್ರತಿ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ ನಂತರವೇ ಮುಂದೆ ಹೋಗಲು ಅವಕಾಶ ನೀಡಲಾಗುತ್ತಿದೆ. ಡ್ರೋನ್‌ಗಳ ಮೇಲೂ ಕೂಡ ನಿಗಾ ಇಡಲಾಗಿದೆ'' ಎಂದು ಅವರು ಇದೇ ಹೇಳಿದರು.
ಈ ಹಿಂದೆ ನಡೆದ ಘಟನೆ ಹಾಗೂ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಎಡಿಜಿ, "ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 250ಕ್ಕೂ ಹೆಚ್ಚು ಗೂಂಡಾಗಳನ್ನು ಗುರುತಿಸಲಾಗಿದೆ. ಈಗಾಗಲೇ ಅವರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ. ಹಲವರನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದೆ. ಕೆಲವು ತಾಂತ್ರಿಕ ಪುರಾವೆಗಳನ್ನು ಸಂಗ್ರಹ ಮಾಡಿದೆ'' ಎಂದು ಅವರು ಹೇಳಿದರು.
ಇದನ್ನೂ ಓದಿ: ಹರಿಯಾಣ: ವಿಎಚ್‌ಪಿ ಯಾತ್ರೆಗಿಲ್ಲ ಅನುಮತಿ, ನೂಹ್ ಜಿಲ್ಲೆಯಲ್ಲಿ ಬಿಗಿ ಭದ್ರತೆ, ಸೆಕ್ಷನ್ 144 ಜಾರಿ...