ನವದೆಹಲಿ : ಭಾರತದಲ್ಲಿ ನೊವಾವಾಕ್ಸ್ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಅಮೆರಿಕ ಮೂಲದ ಕಂಪನಿಯು ಶೀಘ್ರದಲ್ಲೇ ತನ್ನ ಲಸಿಕೆಯ ಪ್ರಯೋಗಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಹೇಳಿದೆ. ಇನ್ನು, ಶೀಘ್ರದಲ್ಲಿ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತದೆ ಎನ್ನಲಾಗಿದೆ.
"ನೊವಾವಾಕ್ಸ್ ಲಸಿಕೆ ತುಂಬಾ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ. ಇದನ್ನು ಭಾರತದಲ್ಲಿ ಉತ್ಪಾದಿಸಲಾಗುವುದು. ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಮತ್ತು ಪೂರ್ಣಗೊಳ್ಳುವ ಹಂತದಲ್ಲಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪಾಲ್ ಹೇಳಿದರು.
ಆಶಾದಾಯಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ನೊವಾವಾಕ್ಸ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುವುದು. ಭಾರತದಲ್ಲಿ 1.1 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ಮೇರಿಲ್ಯಾಂಡ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪುಣೆ ಮೂಲದ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಈಗಾಗಲೇ ಪೂರ್ವ ಸಿದ್ಧತಾ ಕಾರ್ಯಗಳನ್ನು ಮಾಡಿದೆ. ನೊವಾವಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ಅಮೆರಿಕ ಮೂಲದ ನೊವಾವಾಕ್ಸ್, ಅದರ ಮರುಸಂಘಟನೆಯ ನ್ಯಾನೊ ಪಾರ್ಟಿಕಲ್ ಪ್ರೋಟೀನ್ ಆಧಾರಿತ ಕೋವಿಡ್ -19 ಲಸಿಕೆ ಮಧ್ಯಮ ಮತ್ತು ತೀವ್ರ ರೋಗದ ವಿರುದ್ಧ ಶೇ.100ರಷ್ಟು ಹೋರಾಟ ಮಾಡುತ್ತದೆ ಎಂದು ತಿಳಿದು ಬಂದಿದೆ. ಕೋವಿಡ್-19 ವೈರಸ್ ಹರಡುವಿಕೆಯು ಇದೀಗ ತುಂಬಾ ಕಡಿಮೆಯಾಗಿದೆ. ಆದರೆ, ಜನರು ಇನ್ನೂ ಜಾಗರೂಕರಾಗಿರಬೇಕು. ಸೂಕ್ತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಡಾ. ಪಾಲ್ ಹೇಳಿದರು.